ಯಲಹಂಕ :ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ರಾಜಾನುಕುಂಟೆ ಸಮೀಪದ ಶಾನುಭೋಗನಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ. ಶಾನುಭೋಗನಹಳ್ಳಿ ಗ್ರಾಮದ ರಾಶಿ(20) ಹತ್ಯೆಗೀಡಾದವರು. ಇಂದು ಸಂಜೆ 5 ಗಂಟೆ ಸುಮಾರಿಗೆ ಕಾಲೇಜು ಮುಗಿಸಿ ಮನೆಗೆ ಹೊರಟಿದ್ದ ಯವತಿ ದಿಬ್ಬೂರು ಗೇಟಿನಲ್ಲಿ ಬಸ್ನಿಂದ ಇಳಿದಿದ್ದಾರೆ. ಅಲ್ಲಿಂದ ಶಾನುಭೋಗನಹಳ್ಳಿಗೆ ನಡೆದು ಹೋಗುವಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯ ಕತ್ತುಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆಗೀಡಾದ ಯುವತಿ ಯಲಹಂಕದ ಕಾಲೇಜು ಒಂದರಲ್ಲಿ ಪ್ರಥಮ ಬಿ.ಎ ವ್ಯಾಸಂಗ ಮಾಡುತ್ತಿದ್ದರು. ಪ್ರೀತಿ ನಿರಾಕರಿಸಿದ ಹಿನ್ನೆಲೆ ಯುವತಿಯನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿತ: ಕಳೆದ ಕೆಲವು ದಿನಗಳ ಹಿಂದೆ ಯಲಹಂಕದ ಪ್ರತಿಷ್ಟಿತ ಕಾಲೇಜೊಂದರಲ್ಲಿ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ ಅದೇ ಚಾಕುವಿನಿಂದ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. ಯಲಹಂಕ ರಾಜಾನಕುಂಟೆ ಬಳಿಯ ಕಾಲೇಜಿನಲ್ಲಿ ಕೋಲಾರ ಮುಳುಬಾಗಿಲು ಮೂಲದ 19 ವರ್ಷದ ಯುವತಿ ಮೇಲೆ ಪವನ್ ಕಲ್ಯಾಣ್ ಎಂಬಾತ ಚೂರಿ ಇರಿದು ಹತ್ಯೆ ಮಾಡಿದ್ದ. ಬಳಿಕ ತಾನೂ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ, ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿಗಳು ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಧ್ಯೆ ಯುವತಿ ಕೊನೆಯುಸಿರೆಳೆದಿದ್ದಳು. ಆರೋಪಿ ಯುವಕ ಗಾಯಗೊಂಡಿದ್ದು,ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಆರೋಪಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.