ಬಿಬಿಎಂಪಿ ಪಾಲಿಕೆ ಮುಖ್ಯ ಎಂಜಿನಿಯರ್ ಪ್ರಹ್ಲಾದ್ರಿಂದ ಮಾಹಿತಿ ಬೆಂಗಳೂರು: ನಗರದ ಹಲವು ಕಡೆಗಳಲ್ಲಿ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹಲಸೂರು ಕೆರೆ ಬಳಿ ನಿರ್ಮಿಸಲಾಗಿರುವ ವೈಟ್ ಟಾಪಿಂಗ್ ರಸ್ತೆಯ ಮಧ್ಯ ಭಾಗದಲ್ಲಿ ಕುಸಿದ ಪರಿಣಾಮ ಭಾರಿ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ದೊಡ್ಡ ಅನಾಹುತವು ತಪ್ಪಿ ಹೋಗಿದೆ.
ಹಲಸೂರು ಕೆರೆ ಬಳಿಯ ಡಿ. ಭಾಸ್ಕರನ್ ರಸ್ತೆಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿದ್ದ ವೈಟ್ ಟಾಪಿಂಗ್ ರಸ್ತೆ ಏಕಾಏಕಿ ಕುಸಿದಿದೆ. ಪರಿಣಾಮ ಬೃಹತ್ ಕಂದಕ ನಿರ್ಮಾಣವಾಗಿದೆ. ಕಳಪೆ ಕಾಮಗಾರಿಯೇ ರಸ್ತೆ ಕುಸಿತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು, ವಾಹನ ಸವಾರರು ಆರೋಪಿಸಿದ್ದಾರೆ.
ನಿರ್ಮಾಣವಾದ ಒಂದೂವರೆ ವರ್ಷದಲ್ಲೇ ಕುಸಿದ ರಸ್ತೆ: ನಿರ್ಮಾಣ ಮಾಡಿ ಒಂದೂವರೆ ವರ್ಷದಲ್ಲೇ ಕುಸಿದು ಬಿದ್ದುದರಿಂದ ರಸ್ತೆಯ ಗುಣಮಟ್ಟ ಬಟಾಬಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಗುಂಡಿ ದೃಶ್ಯ ಭಾರಿ ವೈರಲ್ ಆಗಿದೆ. ರಸ್ತೆಯ ಹೊಂಡದ ಸುತ್ತ ಬ್ಯಾರಿಕೇಡ್ ಹಾಕಿ ಸಂಚಾರ ಪೊಲೀಸರು ವಾಹನ ಸವಾರರು ಇತ್ತ ಬರದಂತೆ ನಿಗಾ ವಹಿಸಿದ್ದಾರೆ.
ಈ ಕುರಿತು ಬಿಬಿಎಂಪಿ ಪಾಲಿಕೆಯ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ. 'ಬೆಂಗಳೂರು ನಗರದ ರಸ್ತೆಗಳು, ರಸ್ತೆಗಳ ಸ್ಥಳ ಕೇವಲ ವಾಹನಗಳ ಓಡಾಟಕ್ಕೆ ಅಷ್ಟೇ ಅಲ್ಲದೆ, ನೀರಿನ ಕೊಳವೆಗಳು, ಒಳ ಚರಂಡಿ ಕೊಳವೆಗಳು, ಹಾಗೇ ಕೇಬಲ್ಸ್ಗಳೆಲ್ಲ ರಸ್ತೆ ಕೆಳಗಡೆ ಇವೆ. ಈಗ ಗುಂಡಿ ಬಿದ್ದಿರುವ ಭಾಸ್ಕರನ್ ಸರ್ಕಲ್ ಹತ್ರ ವೈಟ್ ಟಾಪಿಂಗ್ ಕೆಳಗಡೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ(BSSB)ಯ ನೀರಿನ ಕೊಳವೆ ಹರಿಯುತ್ತಿದೆ. ಆ ನೀರಿನ ಕೊಳವೆಯಲ್ಲಿ ಸೋರಿಕೆ ಇರುವುದರಿಂದ ರಸ್ತೆ ಕೆಳಗೆ ಇರುವಂತ ಮಣ್ಣಿನ ಪಲ್ಲಟವಾಗಿದೆ. ಆ ಪ್ರಕ್ರಿಯೆಯಿಂದ ವೈಟ್ ಟಾಪಿಂಗ್ ರಸ್ತೆ ಕುಸಿದಿದೆ. ಎಲ್ಲಿ ಎಲ್ಲ ಈ ರೀತಿ ನೀರಿನ ಲಿಕೇಜ್ ಬರುತ್ತದೆ ಅಂಥಹ ಜಾಗಗಳಲ್ಲಿ ಇಂಥಹ ಘಟನೆಗಳು ನಡೆಯುತ್ತದೆ. ಆದರೆ ಎಲ್ಲಾ ಕಡೆ ಈ ರೀತಿ ಆಗುವುದಿಲ್ಲ. ಆದರೆ ಕೆಲವು ಕಡೆ ಡಾಂಬರ್ ರಸ್ತೆಗಳಲ್ಲೂ ಕುಸಿಯುತ್ತದೆ, ವೈಟ್ ಟಾಪಿಂಗ್ ರಸ್ತೆಗಳಲ್ಲಿಯೂ ಕುಸಿಯುತ್ತದೆ. ಭಾಸ್ಕರನ್ ಸರ್ಕಲ್ ಬಳಿ ಕುಸಿದಿರುವ ರಸ್ತೆ 10 ರಿಂದ 15 ಅಡಿ ಆಳವಿದೆ. ಅದನ್ನೆಲ್ಲ ತೆಗೆದು ಸರಿಪಡಿಸಿ ಮತ್ತೆ ವೈಟ್ ಟಾಪಿಂಗ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹೆಲ್ಮೆಟ್ ಹಾಕಿದ್ರೆ ಗುಲಾಬಿ, ಇಲ್ಲದಿದ್ರೆ ದಂಡದ ರಶೀದಿ; ಸಾವು ತಡೆಯಲು ಹಾವೇರಿ ಎಸ್ಪಿ ಜಾಗೃತಿ