ಬೆಂಗಳೂರು: ಉತ್ತರ ಭಾರತದಲ್ಲಿ ಬೀಸುತ್ತಿರುವ ಶೀತ ಗಾಳಿಯ ಪ್ರಭಾವ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೀದರ್ನಲ್ಲಿ ತೀವ್ರವಾಗಿ ತಣ್ಣನೆಯ ಶೀತಗಾಳಿ ಬೀಸುವ ಸಂಭವವಿದ್ದು, ತಾಪಮಾನ 4.5 ಡಿಗ್ರೀ ಸೆಲ್ಸಿಯಸ್ ಇಂದ 6.5 ಡಿಗ್ರೀ ಸೆಲ್ಸಿಯಸ್ಗೆ ಇಳಿಯುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಕಡಿಮೆ 6 ಡಿಗ್ರೀ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹೇಳಿದೆ.
ತೀವ್ರ ಶೀತ ಗಾಳಿ ಬೀಸುತ್ತಿರುವುದರಿಂದ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸೂಕ್ತ ಉಡುಪುಗಳನ್ನು ಧರಿಸಬೇಕು. ದಟ್ಟವಾದ ಮಂಜಿನ ಕಣಗಳು ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ ಮತ್ತು ಶ್ವಾಸಕೋಶದಲ್ಲಿ ನೆಲೆಗೊಳ್ಳುವ ಸಂಭವ ಹೆಚ್ಚಿರುತ್ತದೆ. ಇದರಿಂದ ಉಬ್ಬಸ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಹೆಚ್ಚುತ್ತದೆ. ಸಾಧ್ಯವಾದಷ್ಟು ಮಾಸ್ಕ್ ಧರಿಸಿ ಓಡಾಡಬೇಕು. 3 ರಿಂದ 4 ಉಡುಪುಗಳನ್ನು ಧರಿಸಬೇಕು ಎಂದು ವೈದ್ಯರು ಹೇಳಿದ್ದಾರೆ.
ಸ್ವೆಟರ್‌ಗಳು ಕೈಗವಸ ಧರಿಸಿ/ ಮೂಗಿನಲ್ಲಿ ರಕ್ತ ಸ್ರಾವ:ಹೊರಗಡೆ ಓಡಾಡುವ ಸಮಯದಲ್ಲಿ ಆದಷ್ಟು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಸ್ವೆಟರ್‌ಗಳು ಹಾಗೂ ಕೈಗವಸುಗಳನ್ನು ಬಳಸಬೇಕು ಮತ್ತು ಮನೆಯೊಳಗೆ ಇರುವಾಗ ಕೂಡ ಆದಷ್ಟು ಸ್ವೆಟರ್‌ಗಳು ಧರಿಸುವಂತೆ ತಿಳಿಸಿದ್ದಾರೆ. ದೀರ್ಘ ಸಮಯಗಳವರೆಗೆ ಜನರು ತೀವ್ರ ಚಳಿ ಗಾಳಿಯಲ್ಲಿ ಓಡಾಡಿದಲ್ಲಿ ಮೂಗಿನಲ್ಲಿ ರಕ್ತ, ಅಸ್ತಮಾದಲ್ಲಿ ಏರುಪೇರು, ಜ್ವರದ ಲಕ್ಷಣಗಳು ಹಾಗೂ ತ್ವಚೆಯಲ್ಲಿ ತುರಿಕೆ ಕಂಡುಬರುವ ಲಕ್ಷಣಗಳಿರುತ್ತವೆ. ಇದರಿಂದ ರಕ್ಷಣೆ ಪಡೆದುಕೊಳ್ಳಲು ಹೊರಗೆ ಓಡಾಡುವಾಗ ಉಣ್ಣೆಯ ಟೋಪಿಗಳನ್ನು ಧರಿಸಬೇಕು. ಆದಷ್ಟು ಮನೆಯೊಳಗೆ ಇದ್ದು ಚಪ್ಪಲಿಗಳನ್ನು ಧರಿಸಿ ಓಡಾಡಬೇಕು. ಚಹಾ, ಕಾಫಿ, ಬಿಸಿಯಾದ ಪಾನೀಯಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ.