ಬೆಂಗಳೂರು : ಕರಾವಳಿ ತೀರದ ಸವಕಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮೊರೆ ಹೋಗುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇಂದು ಇತ್ಯರ್ಥಪಡಿಸಿತು.
ಕರಾವಳಿ ತೀರದ ಸವಕಳಿ ತಡೆಗೆ ಕೇರಳದಲ್ಲಿ ಬಳಸುತ್ತಿರುವ ಸಮುದ್ರ ಅಲೆ ತಡೆ (ಸೀ ವೇವ್ ಬ್ರೇಕರ್)ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅಬ್ದುಲ್ ಖಾದರ್ ಜಿಲಾನಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಉಲ್ಲಾಳದಬೆಟ್ಟಪ್ಪಾಡಿ ಗ್ರಾಮ ಸೇರಿದಂತೆ ರಾಜ್ಯದ ಕರಾವಳಿ ಗ್ರಾಮಗಳಲ್ಲಿ ವಾಸಿಸುವ ಮೀನುಗಾರರು ಕರಾವಳಿ ಸವೆತದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರ ಜೀವನ ಮತ್ತು ಜೀವನೋಪಾಯ ಎರಡೂ ಸಂಕಷ್ಟದಲ್ಲಿವೆ. ಇಷ್ಟು ಮಾತ್ರವಲ್ಲದೆ ಪರಿಸರದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಪ್ರತಿ ವರ್ಷ ಬಂಡೆಗಳು ಮತ್ತು ಟೆಟ್ರಾಪಾಡ್‌ಗಳನ್ನು ತಂದು ಹಾಕಿ, ಬೃಹತ್ ಮೊತ್ತವನ್ನು ವಿನಿಯೋಗಿಸುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಕೇರಳ ಮಾದರಿಯಲ್ಲಿ ಸಮುದ್ರ ಅಲೆ ತಡೆ (ಸೀ ವೇವ್ ಬ್ರೇಕರ್)ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.