ಕರ್ನಾಟಕ

karnataka

ETV Bharat / state

'ವಿಶ್ವಾಸ'ಗಳಿಸಲು ಕುಮಾರಸ್ವಾಮಿ ವಿಫಲವಾಗಿದ್ದು ಹೇಗೆ?ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ - govt colapsed detailed story

ಶಾಸಕರ ರಾಜೀನಾಮೆಯಿಂದ ಅಸ್ಥಿರಗೊಂಡಿದ್ದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕೊನೆಗೂ ತನಗಿದ್ದ ಬಹುಮತವನ್ನು ಸಾಬೀತುಪಡಿಸಲು ವಿಫಲವಾಗಿ ಸರ್ಕಾರ ಪತನವಾಗಿದೆ.

ಮೈತ್ರಿ ಸರ್ಕಾರ ಪತನ

By

Published : Jul 23, 2019, 9:41 PM IST

Updated : Jul 23, 2019, 11:02 PM IST

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತದ ನಿರ್ಣಯವನ್ನು ಇಂದು ಸಂಜೆ ಏಳು ಇಪ್ಪತ್ತಕ್ಕೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು ಮತಕ್ಕೆ ಹಾಕಿದಾಗ, ಅದರ ಪರವಾಗಿ 99 ಮತಗಳು ಬಿದ್ದರೆ, ಅದರ ವಿರುದ್ಧ 105 ಮತಗಳು ಬಿದ್ದವು. ಹೀಗಾಗಿ ಬಹುಮತಕ್ಕೆ 103 ಶಾಸಕರ ಬೆಂಬಲ ಬೇಕಿತ್ತು, ಆ ಮೂಲಕ ಸರ್ಕಾರ ವಿಧ್ಯುಕ್ತವಾಗಿ ಪತನಗೊಂಡ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಡಿಯೂರಪ್ಪ ನೂತನ ಸಿಎಂ ಹುದ್ದೆಗೇರುವ ಕ್ಷಣಗಳು ಹತ್ತಿರವಾಗಿವೆ.

ಜುಲೈ 12ರಂದು ಆರಂಭವಾದ ವಿಧಾನಮಂಡಲ ಅಧಿವೇಶನದ ಆರಂಭದ ದಿನವೇ ಸಿಎಂ ಕುಮಾರಸ್ವಾಮಿ ಅವರು, ತಮ್ಮ ಸರ್ಕಾರಕ್ಕೆ ಬಹುಮತವಿಲ್ಲ ಎಂಬ ಭಾವನೆ ಇತ್ತು. ಇದರಿಂದ ವಿಶ್ವಾಸಮತ ಕೋರಲು ಬಯಸಿದ್ದೇನೆ, ಅವಕಾಶ ನೀಡಿ ಎಂದು ಸ್ಪೀಕರ್‌ ಅವರನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿಶ್ವಾಸಮತಯಾಚನೆಗೆ ಸ್ಪೀಕರ್‌ ಅವಕಾಶ ಮಾಡಿಕೊಟ್ಟರಾದರೂ ವಿಷಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಆಟ, ಪ್ರತಿ ಆಟಗಳು ತಾರಕಕ್ಕೇರಿ ಮುಂದೇನು? ಎಂಬ ಕುತೂಹಲ ಸೃಷ್ಟಿಯಾಗಿತ್ತು. ಇನ್ನೂ ದಿನದಿಂದ ದಿನಕ್ಕೆ ಗಡುವು ಕೇಳುತ್ತಾ ಅದರ ಬಿಜೆಪಿಯ ಕೆರಳುವಿಕೆಯನ್ನು ಮೈತ್ರಿ ಸರ್ಕಾರದ ಅಂಗಪಕ್ಷಗಳು ಹೆಚ್ಚಿಸಿದ್ದವು. ಆದರೆ ಇಂದು ಸುಪ್ರೀಂಕೋರ್ಟ್‌ ಇಂದು ಸಂಜೆಯೊಳಗಾಗಿ ಸರ್ಕಾರ ಬಹುಮತ ಯಾಚಿಸದಿದ್ದರೆ ಬುಧವಾರ ತನ್ನ ಮುಂದೆ ಬರುವಂತೆ ಪಕ್ಷೇತರ ಶಾಸಕರ ಅರ್ಜಿಗೆ ಪ್ರತಿಕ್ರಿಯೆ ನೀಡಿತ್ತು.

ಸದನದಲ್ಲಿ ಶಾಸಕರ ಚರ್ಚೆ

ಇಂದು ನಡೆದ ಸಭೆಯ ಕಂಪ್ಲೀಟ್​ ಡೀಟೈಲ್ಸ್​:

ಇಂದು ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ಯಾಚಿಸುತ್ತದೋ? ಅಥವಾ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರುವ ಪರಿಸ್ಥಿತಿಯನ್ನು ನಿರ್ಮಿಸುತ್ತದೋ? ಎಂಬ ಕುತೂಹಲ ಶುರುವಾಗಿತ್ತು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವರು ಮಾತನಾಡಿದ ನಂತರ ರಾತ್ರಿ ವಿಶ್ವಾಸಮತವನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಧ್ವನಿಮತಕ್ಕೆ ಹಾಕಿದರು.

ವಿಶ್ವಾಸಮತವನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಧ್ವನಿಮತಕ್ಕೆ ಹಾಕಿದರು

ಧ್ವನಿ ಮತದ ನಂತರ ಪ್ರತ್ಯೇಕವಾಗಿ ಮತ ಎಣಿಕೆಯನ್ನು ಡಿವಿಷನ್‌ ಆಧಾರದ ಮೇಲೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕರ ಕೋರಿಕೆಯ ಮೇರೆಗೆ ಆ ಪ್ರಕ್ರಿಯೆಯನ್ನು ಆರಂಭಿಸಿದರು. ಮೊದಲು ಎರಡು ನಿಮಿಷಗಳ ಕಾಲದ ಬೆಲ್‌ ಹಾಕಿದ ಸ್ಪೀಕರ್‌ ನಂತರ ವಿಧಾನಸಭೆಯನ್ನು ಪ್ರವೇಶಿಸಲು ಇದ್ದ ಎಲ್ಲ ಬಾಗಿಲುಗಳನ್ನು ಬಂದ್‌ ಮಾಡಿಸಿ,ವಿಶ್ವಾಸ ಮತದ ಪರ ಇರುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದರು. ಮೊದಲ ಸಾಲಿನಿಂದ ಹಿಡಿದು ಕೊನೆಯ ಸಾಲಿನವರೆಗೆ ಲೆಕ್ಕ ಹಾಕಿದಾಗ ವಿಶ್ವಾಸ ಮತದ ಪರವಾಗಿ 99 ಮಂದಿ ಹಾಜರಿರುವುದು ಸ್ಪಷ್ಟವಾಯಿತು. ಆನಂತರ ವಿಶ್ವಾಸ ಮತದ ವಿರುದ್ಧ ಇರುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದಾಗ 105 ಮಂದಿ ಇದ್ದರು. ಆನಂತರ ಸದನದಲ್ಲಿ ಹಾಜರಿದ್ದವರು ಒಟ್ಟು 204 ಮಂದಿ. ಈ ಪೈಕಿ ವಿಶ್ವಾಸ ಮತದ ಪರ 99 ಮಂದಿ ಶಾಸಕರು ಮತ ಚಲಾಯಿಸಿದ್ದಾರೆ. ವಿರುದ್ಧವಾಗಿ 105 ಶಾಸಕರು ಮತ ಚಲಾಯಿಸಿದ್ದಾರೆ ಎಂದು ಘೋಷಿಸಿದರು. ಆ ಮೂಲಕ ಮೈತ್ರಿ ಸರ್ಕಾರ ವಿದ್ಯುಕ್ತವಾಗಿ ಪತನವಾಯಿತಲ್ಲದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಅಧಿಕಾರ ಸೂತ್ರ ಹಿಡಿಯುವುದು ಖಚಿತವಾಯಿತು. ಹೀಗೆ ಸರ್ಕಾರ ಪತನವಾಗುತ್ತಿದ್ದಂತೆಯೇ ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದ ಬಿಜೆಪಿ ಸದಸ್ಯರು ಎರಡು ಬೆರಳುಗಳನ್ನು ಮೇಲೆತ್ತಿ ವಿಜಯದ ಹರ್ಷ ಧ್ವನಿ ಮೊಳಗಿಸಿದರು. ಬಿ.ಎಸ್. ಯಡಿಯೂರಪ್ಪನವರನ್ನು ಬಿಜೆಪಿ ಸದಸ್ಯರು ಹಸ್ತಲಾಘವ ಮೂಲಕ ಅಭಿನಂದಿಸಿದರು.
ರಾಷ್ಟ್ರಗೀತೆ ಮೂಲಕ ಸದನವನ್ನು ಅನಿರ್ದಿಷ್ಟಾವಧಿಗೆ ಸ್ಪೀಕರ್ ಮುಂದೂಡಿದರು.

ವಿಶ್ವಾಸ ಮತದ ಪರವಾಗಿ 99, ವಿರುದ್ಧವಾಗಿ 105 ಶಾಸಕರು

ಸದನಕ್ಕೆ ಗೈರಾಗಿದ್ದ ಶಾಸಕರು:

ಕಾಂಗ್ರೆಸ್ ನಿಂದ ರಾಜೀನಾಮೆ ನೀಡಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಳ್ಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್, ಯಶವಂತಪುರ ಕ್ಷೇತ್ರದ ಎಸ್.ಟಿ ಸೋಮಶೇಖರ್, ಕೆ.ಆರ್ ಪುರಂನ ಭೈರತಿ ಬಸವರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಶಿವಾಜಿನಗರದ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಸುಧಾಕರ್, ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್, ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಗೈರಾಗಿದ್ದರು. ಜೆಡಿಎಸ್‍ನಿಂದ ರಾಜೀನಾಮೆ ಕೊಟ್ಟಿದ್ದ ಹುಣಸೂರು ಕ್ಷೇತ್ರದ ಶಾಸಕ ಎಚ್. ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಕೆ. ಆರ್ ಪೇಟೆಯ ನಾರಾಯಣ ಗೌಡ ಸದನಕ್ಕೆ ಬಂದಿರಲಿಲ್ಲ.

ಇನ್ನು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಗವಾಡದ ಶ್ರೀಮಂತ ಪಾಟೀಲ್, ಬಳ್ಳಾರಿಯ ನಾಗೇಂದ್ರ ಸದನಕ್ಕೆ ಹಾಜರಾಗಿರಲಿಲ್ಲ. ಪಕ್ಷೇತರ ಶಾಸಕರಾದ ಮುಳಬಾಗಿಲು ಶಾಸಕ ಎಚ್ ನಾಗೇಶ್ ಹಾಗೂ ರಾಣೆಬೆನ್ನೂರು ಶಾಸಕ ಆರ್ .ಶಂಕರ್ ಕೂಡ ಸದನಕ್ಕೆ ಗೈರು ಹಾಜರಿ ಹಾಕಿದ್ದರು. ಬಿಎಸ್ ಪಿ ಪಕ್ಷದ ಎನ್. ಮಹೇಶ್ ಸಹ ಸದನಕ್ಕೆ ಬರಲಿಲ್ಲ.

Last Updated : Jul 23, 2019, 11:02 PM IST

For All Latest Updates

ABOUT THE AUTHOR

...view details