ಬೆಂಗಳೂರು: ದೇಶದ ಪ್ರತಿ ಗ್ರಾಮಗಳಿಗೆ ಸಹಕಾರಿ ಆಂದೋಲನವನ್ನು ಕೊಂಡೊಯ್ಯಲು ಸರ್ಕಾರ ಕಟಿಬದ್ಧವಾಗಿದ್ದು, ಕರ್ನಾಟಕ ಇದರಲ್ಲಿ ಮುಂಚೂಣಿಯಲ್ಲಿರುವ ವಿಶ್ವಾಸ ಇದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಪ್ರಶಂಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ಸಹಕಾರ ಸಮಾವೇಶಕ್ಕೆ ಬಂದು ನಾನು ನನ್ನ ಮನೆಗೆ ವಾಪಸ್ ಬಂದ ಹಾಗೆ ಅನಿಸುತ್ತಿದೆ. ಸಣ್ಣ ವಯಸ್ಸಿನಿಂದ ನಾನು ಸಹಕಾರಿ ಆಂದೋಲನದ ಭಾಗವಾಗಿದ್ದೇನೆ. ಕರ್ನಾಟಕದ ಸಹಕಾರ ವಲಯ ದೇಶದ ಹಳೆಯ ವಲಯ ಆಗಿದೆ. ಭಾರತದ ಮೊದಲ ಸಹಕಾರ ಸಂಘ ಹುಟ್ಡಿರುವುದು ಕರ್ನಾಟಕದಲ್ಲಿ ಎಂದು ಸ್ಮರಿಸಿದರು.
ಸಂಕಲ್ಪ ತೆಗೆದುಕೊಳ್ಳಬೇಕು: ದೇಶದ ಆರ್ಥಿಕತೆಗೆ ಗತಿ ನೀಡುವ ಕೆಲಸವನ್ನೂ ಸಹಕಾರ ಆಂದೋಲನ ಮಾಡಿದೆ. ಸಹಕಾರ ರಂಗಕ್ಕೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಇದೆ. ಆದರೆ, ನಮ್ಮ ಮುಂದೆ ಸಾಕಷ್ಟು ಸವಾಲುಗಳೂ ಇವೆ. ನಾವೆಲ್ಲರೂ ಒಂದು ಸಂಕಲ್ಪ ಮಾಡಬೇಕು. ಸಹಕಾರಿ ವಲಯದ ಪಾತ್ರವನ್ನು ರಾಜ್ಯದ ಪ್ರತಿ ಗ್ರಾಮಗಳಲ್ಲಿ ಹೆಚ್ಚಿಸಬೇಕು. ಅದನ್ನು ಪಾರದರ್ಶಕ ಮಾಡುವ, ಕೃಷಿ ವಿಕಾಸ ಹಾಗೂ ಗ್ರಾಮೀಣ ವಿಕಾಸದಲ್ಲಿ ಸಹಕಾರಿ ಆದೋಲನವನ್ನು ಅನಿವಾರ್ಯವಾಗಿಸುತ್ತೇವೆ ಎಂಬ ಸಂಕಲ್ಪ ತೆಗೆದುಕೊಳ್ಳಬೇಕು. ಆ ಗುರಿಗಳನ್ನು ತಲುಪಿದರೆ ಕರ್ನಾಟಕದ ಸಹಕಾರ ಆಂದೋಲನವನ್ನು ಸುವರ್ಣಾಕ್ಷರದಲ್ಲಿ ಬರೆಯಲಾಗುವುದು ಎಂದರು.
ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಶಾ ಹೆಚ್ಚಿನ ಓದಿಗೆ: ಕೋವಿಡ್ ವಿರುದ್ಧ ಪ್ರತಿಕಾಯಗಳನ್ನು ಪರೀಕ್ಷಿಸಲು ಲಾಲಾರಸ ಆಧಾರಿತ ಪರೀಕ್ಷಾ ಕಿಟ್ ತಯಾರು
ಹಾಲು ಉತ್ಪಾದಕರಿಗೆ ಬ್ಯಾಂಕ್ ಮಾಡಿರುವುದು ಇಡೀ ದೇಶದಲ್ಲಿ ಕರ್ನಾಟಕ ಮಾತ್ರವಾಗಿದೆ. ಈ ಬ್ಯಾಂಕ್ ಮೂಲಕ ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ನೀಡುವ ಕೆಲಸ ಆಗಲಿದೆ. ಪಶು ಪಾಲಕರು ತಮ್ಮ ಕಾಲಲ್ಲಿ ನಿಂತು ಆತ್ಮನಿರ್ಭರ ಆಗಲು ಈ ಕ್ಷೀರ ಸಮೃದ್ಧಿ ಬ್ಯಾಂಕ್ ದೊಡ್ಡ ಕೊಡುಗೆ ನೀಡಲಿದೆ. ಸಹಕಾರಿ ರಂಗದಲ್ಲಿ ಪಾರದರ್ಶಕತೆ, ವಿಶ್ವಾಸ ತರಬೇಕಾಗಿದೆ.
ಇದರಲ್ಲಿ ನುಸುಳಿರುವ ಭ್ರಷ್ಟಾಚಾರವನ್ನು ತಡೆಯಬೇಕಾಗಿದೆ. ದೇಶದ ಎಲ್ಲಾ ಪ್ಯಾಕ್ಸ್ ಗಳನ್ನು ಕಂಪ್ಯೂಟರೀಕರಣ ಮಾಡಲು ನಿರ್ಧರಿಸಲಾಗಿದೆ. ಪ್ಯಾಕ್ಸ್, ಜಿಲ್ಲಾ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್, ನಬಾರ್ಡ್ ಗೆ ಒಂದೇ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಲಿದ್ದೇವೆ. ಈ ಸಾಫ್ಟ್‌ವೇರ್ ಎಲ್ಲಾ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಅಮಿತ್ ಶಾ ವಿವರಿಸಿದರು.
ಲಿಕ್ವಿಡೇಷನ್ ಆಗಿರುವ ಪ್ಯಾಕ್ಸ್ ಗಳ ಸುಧಾರಣೆಗೆ ಕೆಲ ಕಾನೂನು ತಿದ್ದುಪಡಿ ತರಲು ರಾಜ್ಯಗಳಿಗೆ ಸಲಹೆಗಳನ್ನು ಕಳುಹಿಸುತ್ತಿದ್ದೇವೆ. ದೇಶದಲ್ಲಿ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಇನ್ನೂ ಇಲ್ಲ. ಅದನ್ನು ಮಾಡಲು ನಿರ್ಧರಿಸಿದ್ದೇವೆ. ಸಹಕಾರ ಋಣ ಖಾತ್ರಿಗಾಗಿ ಕಾರ್ಪಸ್ ಫಂಡ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸಹಕಾರಿ ವಿವಿ ಮಾಡುವಲ್ಲಿ ಮುಂದೆ ಇದ್ದೇವೆ. ಹೊಸ ಸಹಕಾರಿ ನೀತಿಯನ್ನು 2023ರೊಳಗೆ ತರಲಿದ್ದೇವೆ. ದೇಶದ ಸಹಕಾರಿ ವಿಭಾಗವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸಹಕಾರಿ ದೃಷ್ಟಿಯಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯ, ಅಭಿವೃದ್ಧಿ ಶೀಲ ಮತ್ತು ಅಭಿವೃದ್ಧಿ ಹೊಂದದ ರಾಜ್ಯವಾಗಿ ವಿಂಗಡಿಸಿದ್ದೇವೆ. ಈ ಮೂರು ವಿಭಾಗಗಳಿಗೆ ಪ್ರತ್ಯೇಕ ರಣನೀತಿ ಮಾಡಿ ಪ್ರತಿ ಗ್ರಾಮಗಳಿಗೆ ಸಹಕಾರಿ ಆಂದೋಲನ ಕೊಂಡೊಯ್ಯಲು ಕಟಿಬದ್ಧರಾಗಿದ್ದೇವೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಸಹಕಾರ ಸಂಘ ಸ್ವಂತ ಕಾಲಲ್ಲಿ ನಿಲ್ಲಬೇಕು: ಸಿಎಂ ಬೊಮ್ಮಾಯಿ ಮಾತನಾಡಿ, 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ಕೊಡುವ ಸಾಮರ್ಥ್ಯ ಸಹಕಾರ ಸಂಘಗಳಿಗೆ ಬಂದಿದೆ. ಸಹಕಾರ ರಂಗ, ಸಹಕಾರ ಇಲಾಖೆ, ಸಹಕಾರ ಸಂಘಗಳ ಜೊತೆ ಸರ್ಕಾರ ನಿಲ್ಲಲಿದೆ. ಅಮಿತ್ ಶಾ ನೇತೃತ್ವದಲ್ಲಿ ಸಹಕಾರಿ ಕ್ರಾಂತಿ ಆಗಲಿದೆ.
33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ಕೊಡುವ ಸಾಮರ್ಥ್ಯ ಸಹಕಾರ ಸಂಘಗಳಿಗೆ ಬಂದಿದೆ ಎಂದ ಸಿಎಂ ದೇಶದ ಎಲ್ಲಾ ಪ್ಯಾಕ್ಸ್ ಗಳು ಮೂರು ವರ್ಷದಲ್ಲಿ ಕಂಪ್ಯೂಟರೀಕರಣ ಆಗಬೇಕು ಎಂದು ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಸೂಚನೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ 5,775 ಪ್ಯಾಕ್ಸ್ ಗಳನ್ನು ಒಂದು ವರ್ಷದಲ್ಲಿ ಕಂಪ್ಯೂಟರೀಕರಣ ಮಾಡಲು ಕಾರ್ಯಕ್ರಮ ರೂಪಿಸಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರ ಶೇ 60ರಷ್ಟು ಹಣಕಾಸು ನೆರವು ನೀಡಲಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.
ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಸಹಕಾರಿ ರಂಗದ ಹಾಲು ಉತ್ಪಾದಕರ ಶಕ್ತಿ ಏನಿದೆ ಎಂಬುದನ್ನು ಈ ಬ್ಯಾಂಕ್ ತೋರಿಸಲಿದೆ. ಸುಮಾರು 20 ಸಾವಿರ ಕೋಟಿ ಆರ್ಥಿಕ ವಹಿವಾಟು ಆಗುತ್ತದೆ. ಅದೆಲ್ಲವೂ ಈ ಬ್ಯಾಂಕ್ ಮೂಲಕ ಇನ್ನು ಮುಂದೆ ಆಗಲಿದೆ. ಕ್ಷೀರ ಕ್ರಾಂತಿಯ ಎರಡನೇ ಹೆಜ್ಜೆ ಇದಾಗಿದೆ.
ಇದನ್ನೂ ಓದಿ: ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ಕಾಳಿ ಚರಣ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಪ್ರತಿ ತಾಲೂಕಿನಲ್ಲಿ ಈ ಬ್ಯಾಂಕ್ ಇರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗೆ ಈ ಬ್ಯಾಂಕ್ ಉತ್ತೇಜನ ನೀಡಲಿದೆ. ಸಹಕಾರ ಸಂಘಗಳು ಸ್ವಂತ ಕಾಲಿನಲ್ಲಿ ನಿಲ್ಲ ಬೇಕು. ಪಾರದರ್ಶಕತೆ ಬರಬೇಕು. ಮಹಾರಾಷ್ಟ್ರ, ಗುಜರಾತ್ ನಲ್ಲಿ ಸಹಕಾರ ಸರ್ಕಾರವನ್ನು ಆಳುತ್ತವೆ. ಕರ್ನಾಟಕದಲ್ಲಿ ಸರ್ಕಾರ ಯಾವುದೋ ಪ್ಯಾಕ್ಸ್ ನಲ್ಲಿ ನಾಮನಿರ್ದೇಶನ ಹಾಕುವುದು ತೆಗೆಯುವುದರಲ್ಲಿ ನಿಂತಿದ್ದೇವೆ. ಅದು ಬದಲಾವಣೆ ಆಗಬೇಕು. ಪ್ಯಾಕ್ಸ್ ಗಳೆಲ್ಲ ಬ್ಯಾಂಕ್ ಗಳಾಗಿ ಕೆಲಸಮಾಡಬೇಕು. ಆಗ ಮಾತ್ರ ಆರ್ಥಿಕವಾಗಿ ಅಲ್ಲ, ಸಾಮಾಜಿಕವಾಗಿ ಅಲ್ಲ, ರಾಜಕೀಯವಾಗಿ ನಿಮಗೆ ಶಕ್ತಿ ಬರುತ್ತದೆ ಎಂದು ಕರೆ ನೀಡಿದರು.
ನಂದಿನಿ ಕ್ಷೀರಾಭಿವೃದ್ಧಿ ಬ್ಯಾಂಕ್, ಯಶಸ್ವಿನಿಗೆ ಚಾಲನೆ: ಹಾಲು ಉತ್ಪಾದನೆ ಮತ್ತು ಇತರ ಚಟುವಟಿಕೆಗೆ ಆರ್ಥಿಕ ಉತ್ತೇಜನ ನೀಡಲು ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್‌ಗೆ ಅಮಿತ್ ಶಾ ಚಾಲನೆ ನೀಡಿದರು. ದೇಶದಲ್ಲಿ ಮೊದಲ ಬಾರಿಗೆ ಹಾಲು ಉತ್ಪಾದಕರ ಬ್ಯಾಂಕ್ ತೆರೆಯಲಾಗಿದೆ. ರಾಜ್ಯ ಸರ್ಕಾರ 100 ಕೋಟಿ ರೂ. ಕೊಡಲಿದೆ. ಹಾಲು ಮಂಡಳಗಳು 260 ಕೋಟಿ ರೂ. ಷೇರು ಹಾಕಿ ಬ್ಯಾಂಕ್ ಆರಂಭವಾಗಲಿದೆ.ಇದರಿಂದ ಹಾಲು ಉತ್ಪಾದಕರಿಗೆ ಉಪಯೋಗವಾಗಲಿದೆ.
ರಾಜ್ಯದಲ್ಲಿ ಒಟ್ಟು 26ಲಕ್ಷ ಹಾಲು ಉತ್ಪಾದಕರಿದ್ದಾರೆ. 14,900 ಹಾಲು ಸಹಕಾರಿ ಸಂಘಗಳಿವೆ. ಒಟ್ಟು 15 ಹಾಲು ಒಕ್ಕೂಟಗಳಿದೆ. ಇದೇ ವೇಳೆ ರೈತರ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಗೆ 300 ಕೋಟಿ ರೂ. ಮೀಸಲಿಟ್ಟಿದೆ. ಗ್ರಾಮೀಣ ಭಾಗದ ಸಹಕಾರಿ ಕ್ಷೇತ್ರದಲ್ಲಿ ನೋಂದಣಿಯಾದ ಸದಸ್ಯರು ಮತ್ತು ಅವರ ಕುಟುಂಬಸ್ಥರೂ ಸೇರಿ ರಾಜ್ಯದ ಅಂದಾಜು 1.50 ಕೋಟಿ ಸದಸ್ಯರು ಯೋಜನೆಯ ಒಳಪಡಲಿದ್ದಾರೆ.
ಖಾಸಗಿ ವಿಮೆ ಮಾದರಿಯಲ್ಲೇ ಈ ವ್ಯವಸ್ಥೆ ಜಾರಿಯಾಗಲಿದೆ. ಸದಸ್ಯರು ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ823 ಶಸ್ತ್ರಚಿಕಿತ್ಸೆಗೆ ನಗದು ರಹಿತ ಸೌಲಭ್ಯ ಪಡೆಯಲಿದ್ದಾರೆ. ವರ್ಷದಲ್ಲಿ ಒಮ್ಮೆ ಚಿಕಿತ್ಸೆಗೆ ಒಳಗಾದರೆ 1.25 ಲಕ್ಷ ರೂ. ನಗದು ರಹಿತ ಸೌಲಭ್ಯ, ಒಂದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆಗೆ ಒಳಗಾದರೆ 2 ಲಕ್ಷದವರೆಗೂ ನಗದು ರಹಿತ ಸೌಲಭ್ಯ ಸಿಗಲಿದೆ.