ಬೆಂಗಳೂರು: ರಾಜ್ಯ ಸರಕಾರವು ಸೆಮಿಕಂಡಕ್ಟರ್ ಮತ್ತು ವಿದ್ಯುನ್ಮಾನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ ಮತ್ತು ಮೈಸೂರುಗಳನ್ನು ವಿಶೇಷ ಹೂಡಿಕೆ ವಲಯಗಳಾಗಿ ಗುರುತಿಸಲಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದಲ್ಲಿ ನಡೆದ 'ಭಾರತ: ಪ್ರವರ್ಧಮಾನಕ್ಕೆ ಬರುತ್ತಿರುವ ವೈಮಾಂತರಿಕ್ಷ ವಿದ್ಯುನ್ಮಾನ ಕ್ಷೇತ್ರ' ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದಲ್ಲೀಗ 100 ಕೋಟಿ ಮೊಬೈಲ್ ಬಳಕೆದಾರರು ಇದ್ದಾರೆ. ಇದನ್ನು ಗಮನಿಸಿ ಕೃಷಿಯಿಂದ ಹಿಡಿದು ಮಿಕ್ಕ ಎಲ್ಲಾ ಕ್ಷೇತ್ರಗಳಿಗೂ ಡಿಜಿಟಲ್ ಮಾರುಕಟ್ಟೆಯನ್ನು ಸೃಷ್ಟಿಸುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಈಗಾಗಲೇ ಮೈಸೂರಿನಲ್ಲಿ ಸೆಮಿಕಂಡಕ್ಟರ್ ಅಭಿವೃದ್ಧಿ ಸಮಗ್ರ ಕೇಂದ್ರವನ್ನು ಸ್ಥಾಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ದೇಶದಲ್ಲಿ ಈ ಕ್ಷೇತ್ರದಲ್ಲೂ ರಾಜ್ಯವೇ ನಂಬರ್ ಒನ್ ಆಗಿ ಹೊರಹೊಮ್ಮಲಿದೆ. ವಿನ್ಯಾಸ ಕ್ಷೇತ್ರದಲ್ಲಿ ಕೂಡ ರಾಜ್ಯವು ಪ್ರಪಂಚದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು 11,000 ಜನರಿಗೆ ಸೂಕ್ತ ತರಬೇತಿ ಕೊಡಲಾಗಿದೆ. ಇದಕ್ಕೆ ಬಲ ಕೊಡುವಂತೆ ರಾಜ್ಯವು ಮೂರು ವರ್ಷಗಳಿಂದ ನಾವಿನ್ಯತ ಸೂಚ್ಯಂಕದಲ್ಲಿ ಸತತವಾಗಿ ಪ್ರಥಮ ಸ್ಥಾನದಲ್ಲಿದೆ. ಇವೆಲ್ಲವೂ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ನಮ್ಮಲ್ಲಿರುವ ಸೂಕ್ತ ಕಾರ್ಯ ಪರಿಸರ ಮತ್ತು ನೀತಿಗಳ ಸಂಕೇತವಾಗಿದೆ ಎಂದು ವಿವರಿಸಿದರು.