ಬೆಂಗಳೂರು:ನಾಮಪತ್ರಗಳ ಸಲ್ಲಿಕೆ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ನಾಳೆಯಿಂದ ಮೇ 8ರ ವರೆಗೆ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸಲಿದ್ದಾರೆ. ಜಯ ವಾಹಿನಿ ಹೆಸರಿನ ವಾಹನದಲ್ಲಿ ಯಾತ್ರೆ ಹೊರಡಲಿರುವ ಸಿಎಂ, ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.
ನಾಳೆ ಬೆಳಗ್ಗೆ 11 ಗಂಟೆಗೆ ಯಲಹಂಕದಲ್ಲಿ ರೋಡ್ ಶೋ ನಡೆಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ. 11.30ಕ್ಕೆ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. 12.30ಕ್ಕೆ ನೆಲಮಂಗಲದಲ್ಲಿ ರೋಡ್ ಶೋ ನಡೆಸಲಿದ್ದು, ನಂತರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30ಕ್ಕೆ ದಾಬಸ್ ಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
2.15ಕ್ಕೆ ತುಮಕೂರು ಗ್ರಾಮಾಂತರ ಜಿಲ್ಲೆಯ ಗೂಳೂರಿನಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. 3 ಗಂಟೆಗೆ ತುಮಕೂರು ನಗರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 4 ಗಂಟೆಗೆ ಗುಬ್ಬಿ, 5 ಗಂಟೆಗೆ ಕೆಬಿ ಕ್ರಾಸ್, 6 ಗಂಟೆಗೆ ತಿಪಟೂರಿನಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 7 ಗಂಟೆಗೆ ಅರಸೀಕರೆಯಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. 7.45ಕ್ಕೆ ಬಾಣಾವರದಲ್ಲಿ ರೋಡ್ ಶೋ ನಡೆಸುತ್ತಾರೆ. 8.15ಕ್ಕೆ ಕಡೂರಿನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ರಾತ್ರಿ 10 ಗಂಟೆಗೆ ದಾವಣಗೆರೆ ತಲುಪಿ ವಾಸ್ತವ್ಯ ಹೂಡುವರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಭಾನುವಾರ ಪ್ರವಾಸ ಮಾಡಲಿರುವ ಸಿಎಂ ನಂತರ ದಾವಣಗೆರೆ, ಮಧ್ಯ ಕರ್ನಾಟಕ ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗು ಹಳೆ ಮೈಸೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ.