ಬೆಂಗಳೂರು:ಕೊರೊನಾ ವೈರಸ್ ಸೋಂಕಿನಿಂದಾಗಿ ಇಡೀ ದೇಶವೇ ಆತಂಕದಲ್ಲಿದೆ. ಇದರ ಮಧ್ಯೆಯೇ ಕರ್ನಾಟಕದಲ್ಲಿಯೇ ಕೊರೊನಾ ಮೊದಲ ಸಾವು ಸಂಭವಿಸಿರೋ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತಿದೆ.
ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್ಗಳು, ಚಿತ್ರಮಂದಿರ, ಪಬ್ಸ್, ನೈಟ್ ಕ್ಲಬ್, ಎಗ್ಸಿಬಿಷನ್, ಸಮ್ಮರ್ ಕ್ಯಾಂಪ್, ಸಮ್ಮೇಳನ, ಪಾರ್ಟಿ, ಹುಟ್ಟುಹಬ್ಬ, ಎಂಗೇಜ್ಮೆಂಟ್, ಮದುವೆ, ಕ್ರೀಡಾ ಚಟುವಟಿಕೆಗಳು ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನ ನಿಲ್ಲಿಸಬೇಕೆಂದು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವರುಗಳ ಜತೆಗೆ ಸಭೆ ನಡೆಸಿದ ಬಳಿಕಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಹಿತಿ ನೀಡಿದರು.. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಕಷ್ಟು ವಿವರವಾಗಿ ಚರ್ಚಿಸಿದ್ದೇವೆ. ವೈದ್ಯಕೀಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ನಂತರ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಇದಕ್ಕೆ ಜನರ ಸಹಕಾರ ಬೇಕಿದೆ. ಆಮೇಲೆ ಪರಿಸ್ಥಿತಿ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಜನ ಪ್ರವಾಸ ನಿಲ್ಲಿಸಬೇಕೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ಸರ್ಕಾರಿ ಶಾಲೆ, ಕಚೇರಿ, ವಸತಿ ನಿಲಯ, ವಿಶ್ವವಿದ್ಯಾಲಯ ಬಂದ್ ಆಗಲಿವೆ. ರಾಜ್ಯದ ಜನರ ಹಿತದೃಷ್ಟಿಯಿಂದ ಎಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು, ವಿಧಾನ ಮಂಡಲ ಅಧಿವೇಶನ ಮುಂದುವರಿಯಲಿವೆ. ಪ್ರಾಥಮಿಕ ಶಾಲೆಗಳ ರಜೆ ಮುಂದುವರಿಯಲಿದೆ. ಇತರೆ ರಾಷ್ಟ್ರಗಳು ಕೈಗೊಂಡ ಕ್ರಮವನ್ನೇ ನಾವೂ ಕೈಗೊಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಚಿತ ಮಾರ್ಗದರ್ಶನವನ್ನು ಪಾಲಿಸುತ್ತಿದ್ದೇವೆ ಎಂದಿದ್ದಾರೆ.
ಶೇ.70ಕ್ಕಿಂತ ಹೆಚ್ಚು ಮಂದಿ ಸ್ವಯಂ ಜಾಗೃತಿ ತೆಗೆದುಕೊಂಡಿದ್ದಾರೆ. ಇದರಿಂದ ರಾಜ್ಯಕ್ಕೆ ಅಂತಹ ಆತಂಕ ಬೇಡ. ಸಾಧ್ಯವಾದಷ್ಟು ಶೇಕ್ ಹ್ಯಾಂಡ್ ಮಾಡಬೇಡಿ. ಆರು ಅಡಿ ದೂರದಲ್ಲಿರಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದು, ಅವರೂ ಕೂಡ ಸಹಕರಿಸಲು ಒಪ್ಪಿದ್ದಾರೆ. ಇಂದಿನ ಸಭೆಯಲ್ಲಿ ನಾವು ಸಾಕಷ್ಟು ಮುಂಜಾಗ್ರತಾ ಕ್ರಮದ ಸೂಚನೆ ನೀಡಿದ್ದೇವೆ. ಈಗಾಗಲೇ ಸಮಾರಂಭ ನಿಗದಿಪಡಿಸಿದವರು ಸರಳ ಆಚರಣೆಗೆ ಮುಂದಾಗಬೇಕು ಎಂದು ಸಲಹೆ ಇತ್ತರು.
ಕಲಬುರಗಿಯಲ್ಲಿ ಎಚ್ಚರಿಕೆ :ಕಲಬುರುಗಿಯಲ್ಲಿ ಮೃತಪಟ್ಟ ವ್ಯಕ್ತಿಗೆ 46 ಜನರ ಜೊತೆ ಸಂಪರ್ಕವಿತ್ತು. 36 ಜನರ ಜೊತೆ ನೇರ ಸಂಪರ್ಕ ಹೊಂದಿದ್ದರು. ಆ ಎಲ್ಲಾ ವ್ಯಕ್ತಿಗಳನ್ನೂ ಪರೀಕ್ಷೆಗೊಳಪಡಿಸುತ್ತೇವೆ. ಇವರ ಬಗ್ಗೆ ಕೂಡ ನಿಗಾ ವಹಿಸಿದ್ದೇವೆ. ಸದ್ಯ ಕಲಬುರಗಿಯಲ್ಲಿ ಅವರ ಕುಟುಂಬಸ್ಥರು 4 ಮಂದಿ ಸೇರಿ 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಡಿಸಿಎಂ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ಡಿಸಿಎಂ ಅಶ್ವತ್ಥ್ ನಾರಯಣ, ಸಚಿವ ಸುರೇಶ್ ಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಜತೆಗೆ ಸಿಎಂ ಇವತ್ತು ಸಭೆ ನಡೆಸಿದ ಬಳಿಕ ಈ ಮಾಹಿತಿ ನೀಡಿದ್ದಾರೆ.