ಬೆಂಗಳೂರು: ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಲಿದ್ದು, ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಮಾತನಾಡಲಿದ್ದಾರೆ.
ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದು, ವಿವಿಧ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದು, ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಲ್ಲದೆ ಜೂನ್ 1 ರಿಂದ 5ನೇ ಹಂತದ ಲಾಕ್ಡೌನ್ ಮುಂದುವರಿಕೆ ಇದೆಯಾ, ಇಲ್ಲವೋ ಎಂಬ ಮಾಹಿತಿಯನ್ನೂ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಜನರ ಬೇಡಿಕೆ ಹಿನ್ನೆಲೆ ನಾಳೆ ಕರ್ಫ್ಯೂ ಇಲ್ಲ:
ಸಿಎಂ ಜೊತೆ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಐಟಿ ಕ್ಷೇತ್ರ, ವ್ಯಾಪಾರಸ್ಥರು, ಶ್ರಮಿಕರಿಗೆ ಶಾಪಿಂಗ್ ಮಾಡಲು ನಾಳೆ ಕರ್ಫ್ಯೂ ರದ್ದು ಮಾಡಿ ಅವಕಾಶ ನೀಡಲಾಗಿದೆ. ಜೂನ್ 1 ರಿಂದ ಚಿತ್ರಮಂದಿರಗಳು, ಶಾಪಿಂಗ್ ಮಾಲ್ ಬಿಟ್ಟು ಬೇರೆ ಚಟುವಟಿಕೆಗೆ ಮುಕ್ತ ಅವಕಾಶಾ ನೀಡುವ ಮನಸ್ಸಿದೆ. ವಿಮಾನ ಹಾರಾಟವೇ ಆರಂಭವಾಗಿದೆ. ಹೀಗಾಗಿ ಅವಶ್ಯಕತೆ ನೋಡಿಕೊಂಡು ಸಡಿಲಿಕೆ ಮಾಡಲಾಗುವುದು ಎಂದು ಹೇಳಿದರು.
ಹೋಟೆಲ್ ಆರಂಭಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಿಎಂ ಅವಕಾಶ ನೀಡಬಹುದು. ಮೇ 31ರ ಕೇಂದ್ರದ ಮಾರ್ಗಸೂಚಿಗಳನ್ನು ನೋಡಿಕೊಂಡು ಹೊಸ ಆದೇಶ ನೀಡಲಾಗುವುದು ಎಂದರು.
ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ವಿಚಾರವಾಗಿ, ಈ ಸಂದರ್ಭದಲ್ಲಿ ರಾಜಕಾರಣಕ್ಕಿಂತ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕಾಗಿದೆ. ಯಡಿಯೂರಪ್ಪನವರು ಉತ್ತಮವಾಗಿ ಯುವಕರನ್ನು ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡೋದು ಸರಿಯಲ್ಲ. ಭಿನ್ನಮತ ನಡಿತಿರೋದು ಸುಳ್ಳು. ಯಾರೋ ನಾಲ್ಕು ಜನ ಸೇರಿ ಊಟ ಮಾಡಿದರೆ ಅದು ಭಿನ್ನಮತ ಅಲ್ಲ. ಬಿಎಸ್ವೈ ನಮ್ಮ ನಾಯಕರು ಎಂದು ಎಲ್ಲರೂ ಹೇಳಿದ್ದಾರೆ. ಮುಂದಿನ ಮೂರು ವರ್ಷ ಅವರೇ ಸಿಎಂ ಆಗಿರುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಹಗಲುಗನಸು ಕಾಣುವುದು ಬೇಡ. ಕಾಂಗ್ರೆಸ್ನಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ನೋಡಿಕೊಳ್ಳುವುದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುವುದು ಬೇಡ. ಕೊರೊನಾ ಮುಗಿಯುವವರೆಗೂ ಎಲ್ಲಾ ಶಾಸಕರು ಸುಮ್ಮನೇ ಇೋರುವುದು ಒಳ್ಳೆಯದು. ರಾಜಾಹುಲಿಗೆ ನಿವೃತ್ತಿ ಅನ್ನೋದು ಬರಲ್ಲ ಎಂದು ತಿರುಗೇಟು ನೀಡಿದರು.