ಬೆಂಗಳೂರು:ಸದಾ ರಾಜಕೀಯ ಚಟುವಟಿಕೆ, ಆಡಳಿತಾತ್ಮಕ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಸಿಎಂ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್ಗೆ ಒಳಗಾಗಿದ್ದು, ಬಿಡುವಿನ ಈ ಸಮಯವನ್ನು ಪುಸ್ತಕ, ಕಾದಂಬರಿ ಓದುವುದರಲ್ಲಿ ಕಳೆಯುತ್ತಿದ್ದಾರೆ.
ರಾಜಕೀಯ ಜಂಜಾಟದ ಕಾರ್ಯ ಚಟುವಟಿಕೆಯಲ್ಲೇ ಸಿಎಂ ಕಾಲ ಕಳೆಯುತ್ತಿದ್ದು, ದಿನ ಬೆಳಗಾದರೆ ಕೊರೊನಾ ನಿಯಂತ್ರಣ ಅವಲೋಕನ, ಅಧಿಕಾರಿಗಳ,ಸಚಿವರ ಸಭೆ, ಗಣ್ಯರ ಭೇಟಿ ಹೀಗೆ ಇಡೀ ದಿನ ಕಳೆಯುತ್ತಾರೆ. ಇಳಿ ವಯಸ್ಸಿನಲ್ಲೂ ಪಾದರಸದಂತೆ ಸಭೆಗಳು,ಕಾರ್ಯಕ್ರಮಗಳಲ್ಲಿ ಅತ್ಯುತ್ಸಾಹದಿಂದ ಸಿಎಂ ಭಾಗಿಯಾಗುತ್ತಾರೆ. ಕ್ವಾರಂಟೈನ್ನಲ್ಲಿದ್ದರೂ ಸಭೆ ನಡೆಸಿ ವಿಡಿಯೋ ಸಂವಾದಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಸಿಎಂ ಬದ್ಧತೆಗೆ ನಿದರ್ಶನ.
ಸದ್ಯ ಹೋಂ ಕ್ವಾರಂಟೈನ್ನಲ್ಲಿರುವ ಸಿಎಂ ಕಾದಂಬರಿ ಓದುವ ಮೂಲಕ ತಮ್ಮ ಬಿಡುವಿನ ಸಮಯದ ಸದ್ಬಳಕೆಗೆ ಮುಂದಾಗಿದ್ದಾರೆ. ವಿ ಎಸ್ ಖಾಂಡೇಕರ್ ರಚಿತ ವಿಎಂ ಇನಾಂದಾರ್ ಕನ್ನಡಕ್ಕೆ ಅನುವಾದ ಮಾಡಿರುವ ಯಯಾತಿ ಕಾದಂಬರಿಯನ್ನ ಸಿಎಂ ಓದುತ್ತಿದ್ದಾರೆ.
ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು, ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ. ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್ಡೌನ್ ಮತ್ತು ಸೆಲ್ಫ್ ಕ್ವಾರಂಟೈನ್ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿ ಜೊತೆಗೆ ಕಳೆಯುತ್ತಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.