ಕರ್ನಾಟಕ

karnataka

ETV Bharat / state

ಅಂಗೈನಲ್ಲೇ ಉದ್ಯೋಗ ಮಾಹಿತಿ: 'ಕೌಶಲ್ಯ ಸಂಪರ್ಕ ವೇದಿಕೆ'ಗೆ ಚಾಲನೆ ಕೊಟ್ಟ ಸಿಎಂ

ಸೋಮವಾರ ಕೌಶಲ್ಯಾಭಿವೃದ್ಧಿ ನಿಗಮವು ಖಾಸಗಿ ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳನ್ನು ಒಂದೇ ವೇದಿಕೆಗೆ ತಂದು ನಿರುದ್ಯೋಗ ನಿವಾರಿಸುವ ಸಲುವಾಗಿ ರೂಪಿಸಲಾಗಿರುವ ’ಕೌಶಲ್ಯ ಸಂಪರ್ಕ ವೇದಿಕೆ’ ಪೋರ್ಟಲ್ ಉದ್ಘಾಟಿಸಿದ ಸಿಎಂ.

CM Yediyurappa
ಅಂಗೈನಲ್ಲೇ ಉದ್ಯೋಗ ಮಾಹಿತಿ

By

Published : Jun 29, 2020, 8:00 PM IST

ಬೆಂಗಳೂರು:ಕೋವಿಡ್-19ನಿಂದಾಗಿ ರಾಜ್ಯದಲ್ಲಿ ಕುಂಠಿತಗೊಂಡಿರುವ ಆರ್ಥಿಕ, ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಸೋಮವಾರ ಕೌಶಲ್ಯಾಭಿವೃದ್ಧಿ ನಿಗಮವು ಖಾಸಗಿ ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳನ್ನು ಒಂದೇ ವೇದಿಕೆಗೆ ತಂದು ನಿರುದ್ಯೋಗ ನಿವಾರಿಸುವ ಸಲುವಾಗಿ ರೂಪಿಸಲಾಗಿರುವ ’ಕೌಶಲ್ಯ ಸಂಪರ್ಕ ವೇದಿಕೆ’ ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಅವರು, ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ವಲಸೆ ಕಾರ್ಮಿಕರಿಗೆ ಇದು ವರದಾನವಗಲಿದೆ ಮತ್ತು ಅವರಿಗೂ ತರಬೇತಿ ನೀಡಲಾಗುವುದು ಎಂದರು.

ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ, ಯಾರಿಗೆ ಕೆಲಸದ ಅಗತ್ಯವಿದೆ ಎಂಬ ಮಾಹಿತಿ ಈ ಪೋರ್ಟಲ್​​ನಲ್ಲಿ ಲಭ್ಯವಿರುತ್ತದೆ. ಲಭ್ಯವಿರುವ ಉದ್ಯೋಗಗಳಿಗೆ ಅಗತ್ಯವಾದ ತರಬೇತಿಯನ್ನು ನೀಡಿ ಆ ಅಭ್ಯರ್ಥಿಗಳಿಗೆ ಕೌಶಲ್ಯ ನೀಡಿ ಸಂಬಂಧಿತ ಕಂಪನಿಗೆ ಕಳಿಸಲಾಗುವುದು ಎಂದರು.

ಪೋರ್ಟಲ್​ನಲ್ಲಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಖಚಿತವಾಗಿ ಕೆಲಸ ದೊರೆಯುತ್ತದೆ. ಅದೇ ರೀತಿ ಕಂಪನಿಗಳಿಗೂ ಈ ಸಂಪರ್ಕ ವೇದಿಕೆ ಮೂಲಕ ಉತ್ತಮ ಗುಣಮಟ್ಟದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ದೊರೆಯುತ್ತದೆ ಎಂದು ಅಷ್ಟೇ ಖಚಿತವಾಗಿ ಹೇಳಬಲ್ಲೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮಾಹಿತಿ, ಸಂಪರ್ಕದ ಸೇತುವೆ:

ಕೌಶಲ್ಯ ಸಂಪರ್ಕ ವೇದಿಕೆ ಪೋರ್ಟಲ್ ಬಗ್ಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಹಾಗೂ ಕೌಶಲಾಭಿವೃದ್ಧಿ ಖಾತೆ ಸಚಿವರೂ ಆದ ಡಾ. ಸಿ.ಎನ್.ಅಶ್ವತ್ಥ್​​ ನಾರಾಯಣ, ರಾಜ್ಯದ ಯುವಜನರಿಗೆ ವರದಾನವಾಗಬಲ್ಲ ಈ ಪೋರ್ಟಲ್​ನಿಂದ ಗಣನೀಯವಾಗಿ ನಿರುದ್ಯೋಗ ಸಮಸ್ಯೆ ತಪ್ಪಲಿದೆ ಎಂದರು.

ಇದುವರೆಗೂ ರಾಜ್ಯದದಲ್ಲಿ ಊದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವೆ ಮಾಹಿತಿ, ಸಂಪರ್ಕದ ಕೊರತೆ ಇತ್ತು. ಈಗ ಆ ಪರಿಸ್ಥಿತಿ ಬದಲಾಗಿ ಕುಗ್ರಾಮದಲ್ಲಿರುವ ಪ್ರತಿಭಾವಂತರಿಗೂ ಎಲ್ಲೆಲ್ಲಿ ಉದ್ಯೋಗ ಸಿಗಲಿದೆ ಎಂಬ ಮಾಹಿತಿ ಸರಳವಾಗಿ ಸಿಗಲಿದೆ. ಪ್ರತಿಭೆಗೆ ತಕ್ಕ ಕೆಲಸ ಹಾಗೂ ಉದ್ಯೋಗದಾತರಿಗೆ ತಮ್ಮ ಅಗತ್ಯಕ್ಕೆ ತಕ್ಕ ಮಾನವ ಸಂಪನ್ಮೂಲ ಲಭ್ಯವಾಗಲಿದೆ ಎಂದು ಡಿಸಿಎಂ ಹೇಳಿದರು.

ಸರ್ಕಾರವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಿದೆ. ಅವರ ಬೇಡಿಕೆಗೆ ತಕ್ಕಂತೆ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಕಳಿಸಲಾಗುವುದು. ಇದು ಅತ್ಯಂತ ಪರಿಣಾಮಕಾರಿ. ರಾಜ್ಯದ ಪ್ರಗತಿಗೆ ಇದು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ?

ಇದು ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳ ಸಂಪರ್ಕ ಕೊಂಡಿ. ಇದರ ಮೂಲಕ ಕಂಪನಿಗಳು ತಮಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಗ್ಗೆ ಬೇಡಿಕೆ ಇಡಬಹುದು. ಅದರನ್ವಯ ಉದ್ಯೋಗಾಂಕ್ಷಿಗಳು ತಮ್ಮ ವಿದ್ಯಾರ್ಹತೆ, ಕೌಶಲ್ಯಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಉದ್ಯೋಗದ ಬೇಡಿಕೆಗೆ ಅನುಗುಣವಾಗಿ ತಂತ್ರಜ್ಞಾನವನ್ನು ಬಳಸಿ ಉದ್ಯೋಗಿಗಳನ್ನು ಪೋರ್ಟಲ್ ಹೊಂದಾಣಿಕೆ ಮಾಡಲಿದೆ.

ಜಾಬ್ ಮಾರುಕಟ್ಟೆಗೆ ಬೇಡಿಕೆ ಅನುಗುಣವಾಗಿ ಯುವಕರು ಕೆಲಸ ಹುಡುಕುವುದು ಸುಲಭ. ಅಂಗೈಯಲ್ಲಿ ಎಲ್ಲ ಮಾಹಿತಿಯೂ ಅವರಿಗೆ ಸಿಗಲಿದೆ.

ಅದೇ ರೀತಿ ಈ ಪೋರ್ಟಲ್ ಮೂಲಕ ಕಂಪನಿಗಳು ಕೂಡ ಆಕಾಂಕ್ಷಿಗಳ ಮಾಹಿತಿಯನ್ನು ನೋಡಬಹುದು. ತಮಗೆ ಸೂಕ್ತವೆನಿಸಿದರೆ ನೇರ ಸಂದರ್ಶನಕ್ಕೆ ಕರೆಯಬಹುದು. ಇಲ್ಲವೇ ತಮಗೆ ಅಗತ್ಯವಾದ ಮಾನವ ಸಂಪನ್ಮೂಲದ ಬಗ್ಗೆ ಕೌಶಲ್ಯಾಭಿವೃದ್ಧಿ ನಿಗಮಕ್ಕೆ ಕೋರಿಕೆ ಸಲ್ಲಿಸಬಹುದು. ಅದೇ ರೀತಿ ಅಭ್ಯರ್ಥಿಗಳು ಕೂಡ ತಮಗೆ ಸೂಕ್ತವಾದ ಉದ್ಯೋಗಗಳನ್ನು ಹುಡುಕಿಕೊಳ್ಳಬಹುದು. ಜತೆಗೆ ತಮ್ಮ ಸಾಮರ್ಥ್ಯದ ಮೌಲ್ಯಮಾಪನವನ್ನೂ ಮಾಡಿಕೊಳ್ಳಬಹುದು.

ABOUT THE AUTHOR

...view details