ಬೆಂಗಳೂರು:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ಒಂದು ಕಡೆ ಪಕ್ಷ ಕ್ರಮ ಕೈಗೊಳ್ಳುತ್ತಿಲ್ಲ. ಮತ್ತೊಂದು ಕಡೆ ಯತ್ನಾಳ್ ಬಾಯಿ ಮುಚ್ಚುತ್ತಿಲ್ಲ. ಒಂದು ರೀತಿಯಲ್ಲಿ ಸಿಎಂಗೆ ಬೇಡದ ಕೂಸಾಗಿದ್ದಾರೆ ಯತ್ನಾಳ್.
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ವೇಳೆ ರಾಜ್ಯ ಬಿಜೆಪಿ ನಾಯಕರ ಪ್ರಬಲ ವಿರೋಧದ ನಡುವೆಯೂ ಬಸನಗೌಡ ಪಾಟೀಲ್ ಯತ್ನಾಳ್ಗೆ ಪಟ್ಟುಹಿಡಿದು ಟಿಕೆಟ್ ಕೊಡಿಸಿದ್ದ ಮುಖ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಂತರ ಅವರ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಆದರೆ ಈಗ ಅದೇ ಯತ್ನಾಳ್ ಸಿಎಂ ಯಡಿಯೂರಪ್ಪಗೆ ಬೇಡದ ಕೂಸಾಗಿದ್ದಾರೆ. ಹೆಜ್ಜೆಹೆಜ್ಜೆಗೂ ಅಪಸ್ವರ ಎತ್ತುತ್ತಾ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುತ್ತಿದ್ದಾರೆ.
ಒಂದು ರೀತಿಯಲ್ಲಿ ಇಲ್ಲದ ಸಮಸ್ಯೆಯನ್ನು ತಾವೇ ಸೃಷ್ಟಿಸಿಕೊಂಡ ಸ್ಥಿತಿ ಯಡಿಯೂರಪ್ಪ ಅವರದ್ದಾಗಿದೆ. ಯತ್ನಾಳ್ಗೆ ಟಿಕೆಟ್ ಕೊಡದೇ ಇದ್ದಿದ್ದರೆ ಇಂದು ಇಂತಹ ಸ್ಥಿತಿಯೇ ಎದುರಾಗುತ್ತಿರಲಿಲ್ಲ ಎಂದು ಯಡಿಯೂರಪ್ಪ ಅಂದುಕೊಳ್ಳುವಂತಾಗಿದೆ.
ಕಳೆದ ಒಂದು ವರ್ಷದಿಂದ ಯತ್ನಾಳ್ ಸಿಎಂ ಕಾರ್ಯ ವೈಖರಿ ಟೀಕಿಸಿಕೊಂಡೇ ಬರುತ್ತಿದ್ದಾರೆ. ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎನ್ನುವ ಪಕ್ಷದ ಸೂಚನೆಯನ್ನು ಕಡೆಗಣಿಸಿ ಬಹಿರಂಗ ಹೇಳಿಕೆ ನೀಡುವುದನ್ನು ಮುಂದುವರೆಸಿದ್ದಾರೆ. ಆದರೆ ಇದೂವರೆಗೂ ಯತ್ನಾಳ್ಗೆ ಪಕ್ಷ ಶೋಕಾಸ್ ನೋಟಿಸ್ ಕೂಡ ನೀಡಿಲ್ಲ. ಸಿಎಂ ಓರ್ವ ಶಾಸಕನನ್ನು ನಿಯಂತ್ರಿಸಲಾಗದೆ ಮುಜುಗರಕ್ಕೊಳಗಾಗುವಂತಾಗಿದೆ.