ಬೆಂಗಳೂರು:ಅಧಿವೇಶನದಲ್ಲಿ ಪ್ರತಿಪಕ್ಷ ಸದಸ್ಯರ ವಾಗ್ದಾಳಿ ಸಮಯದಲ್ಲಿ ಸರ್ಕಾರ ಹಾಗೂ ಸಚಿವರ ಬೆಂಬಲಕ್ಕೆ ನಿಲ್ಲುವಂತೆ ಸ್ವ ಪಕ್ಷೀಯ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.
ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸದನದಲ್ಲಿ ಸಚಿವರ ಜೊತೆ ನಿಲ್ಲಬೇಕು. ಇತ್ತೀಚಿಗೆ ಯಾರೂ ಕೂಡ ಸದನದಲ್ಲಿ ಮಾತಾಡುತ್ತಿಲ್ಲ. ಯಾವುದೇ ಸರ್ಕಾರ ಇದ್ದರೂ, ಆ ಪಕ್ಷದ ಶಾಸಕರು ಆ ಸರ್ಕಾರದ ಪರ ಇರಬೇಕು. ಈಗಲೂ ನಮ್ಮ ಸರ್ಕಾರದ ಪರ ನೀವು ನಿಲ್ಲಬೇಕು. ಸರ್ಕಾರದ ಕಾರ್ಯಗಳನ್ನು ವಿವರಿಸುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ಕೊಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ.