ಬೆಂಗಳೂರು: ಕಾರ್ಮಿಕರಿಗೆ ಶುಭ ಕೋರಿರುವ ಸಿಎಂ ಬಿಎಸ್ವೈ, "ನಾಡಿನ ಎಲ್ಲ ಶ್ರಮಿಕ ಬಂಧುಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಶುಭಾಶಯಗಳು. ದೇಶ ನಿರ್ಮಾಣದ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ನಮ್ಮ ಲಕ್ಷಾಂತರ ಶ್ರಮಿಕರ, ಕಾರ್ಮಿಕರ ಪರಿಶ್ರಮ ಮತ್ತು ಬದ್ಧತೆ ಅನುಪಮವಾದದ್ದು. ಅವರೆಲ್ಲರ ಸಮರ್ಪಣಾಭಾವ ಹಾಗೂ ಸಾಧನೆಗಳಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ." ಎಂದಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, "ಸಮಸ್ತ ಕಾರ್ಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಕಾರ್ಮಿಕರ ದುಡಿಮೆ ಮತ್ತು ಪರಿಶ್ರಮ ನಮ್ಮ ಸಮಾಜದ ಏಳಿಗೆಯ ಅಡಿಪಾಯ. ಕಾರ್ಮಿಕರ ದಿನಾಚರಣೆಯಾದ ಇಂದು ಸಮಸ್ತ ಕಾರ್ಮಿಕರಿಗೂ ಕೃತಜ್ಞತೆಗಳನ್ನು ಸಲ್ಲಿಸೋಣ." ಎಂದು ಶುಭ ಕೋರಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಕಾರ್ಮಿಕರ ದಿನದ ಅಂಗವಾಗಿ ಶುಭಾಶಯ ಕೋರಿದ್ದು, "ಉಣ್ಣುವ ಕೈಗಳಿಗೆ, ಮನೆಗಳ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯುವ ಕೈಗಳೇ ಆಧಾರ. ಅಂತಹ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. ಕಾರ್ಮಿಕರಿದ್ದರೆ ಮಾಲೀಕರಾಗೋದು, ಮಾಲೀಕ ಕಾರ್ಮಿಕ ಇಬ್ಬರೂ ಪರಸ್ಪರ ಪೂರಕವಾಗಿರಬೇಕು. ಹಾಗಾಗಿ ಕಾರ್ಮಿಕರ ಶೋಷಣೆ ಕೊನೆಗೊಳ್ಳಲಿ. ಕೊರೊನಾ ಕಗ್ಗತ್ತಲು ಕಳೆದು ಕಾರ್ಮಿಕರ ಬಾಳಲ್ಲಿ ಹೊಸ ಬೆಳಕು ಮೂಡಲಿ. ಎಲ್ಲರ ಬದುಕು ಹಸನಾಗಲಿ ಎಂದು ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.
"ಕಾರ್ಮಿಕ ಬಂಧುಗಳು ಎದುರಿಸುತ್ತಿರುವ ಕೊರೊನಾ ರೋಗದ ಸಂಕಷ್ಟದ ದಿನಗಳು ಶೀಘ್ರ ದೂರವಾಗಲಿ. ಸರ್ಕಾರ ಮತ್ತು ಸಮಾಜ ಕಾರ್ಮಿಕರ ಕಷ್ಟ-ನಷ್ಟಗಳಿಗೆ ಮಾನವೀಯವಾಗಿ ಸ್ಪಂದಿಸಲಿ. ವರ್ತಮಾನದ ಕಷ್ಟವನ್ನು ಎದುರಿಸುವ ಚೈತನ್ಯ ಕಾರ್ಮಿಕ ಬಂಧುಗಳದ್ದಾಗಲಿ. ಕಾರ್ಮಿಕ ದಿನಾಚರಣೆಯ ಶುಭಾಶಯಗಳು." ಎಂದು ತಮ್ಮ ಟ್ವಿಟರ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಮಿಕರಿಗೆ ಶುಭಾಶಯ ತಿಳಿಸಿದ್ದಾರೆ.