ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ ಎನ್ನುವ ಮೂಲಕ ಲಾಕ್ಡೌನ್ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದು, ರಫ್ತು ಸಂಬಂಧಿತ ಉದ್ಯಮಕ್ಕೆ ಗುರುವಾರದಿಂದ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫ್ತು ಮಾಡುವ ಹಾಗು ರಫ್ತು ಅವಲಂಬಿತ ಉದ್ಯಮಗಳಿಗೆ ಗುರುವಾರದಿಂದ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೊಳಿಸಿದ್ದು, ಜೂನ್ 7ರವರೆಗೆ ಇದು ಜಾರಿಯಲ್ಲಿದೆ. ಲಾಕ್ಡೌನ್ ವಿಸ್ತರಣೆ ಮಾಡುವ ಕುರಿತು ಇಂದು ತಜ್ಞರ ಸಮಿತಿ ಸಭೆ ಹಾಗೂ ಸಚಿವರ ಸಭೆಯಲ್ಲಿ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಮುಖವಾಗಿ ಕೆಲ ವಲಯಕ್ಕೆ ಲಾಕ್ಡೌನ್ ಸಡಿಲಿಕೆ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಲಾಕ್ಡೌನ್ ವಿಸ್ತರಿಸುವ ಜೊತೆಗೆ ಬಿಗಿ ಕ್ರಮ ಕೈಗೊಂಡು ಏನೆಲ್ಲ ಮಾಡಬಹುದು ಎನ್ನುವ ಕುರಿತು ಇಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಲಾಕ್ಡೌನ್ ಜಾರಿಯಲ್ಲಿದ್ದರೂ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಗ್ರಾಮೀಣ ಭಾಗದಲ್ಲಿ ಇನ್ನೂ ಕಡಿಮೆಯಾಗಿಲ್ಲ, ಹಾಗಾಗಿ ಇದನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲಾಕ್ಡೌನ್ ವಿಸ್ತರಣೆ ಸುಳಿವು ನೀಡಿದರು.
ಈಗಾಗಲೇ ಮೊದಲನೇ ಆರ್ಥಿಕ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಬಿಟ್ಟುಹೋಗಿರುವ ಕೆಲ ವಲಯಕ್ಕೆ ಎರಡು ದಿನಗಳಲ್ಲಿ ಎರಡನೇ ಪ್ಯಾಕೇಜ್ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ರು.
ರಫ್ತು ಸಂಬಂಧಿತ ಉದ್ಯಮಕ್ಕೆ ಗುರುವಾರದಿಂದ ಅನುಮತಿ ನೀಡಿ ಸರ್ಕಾರಿ ಆದೇಶ:
ರಫ್ತು ಸಂಬಂಧಿತ ಉದ್ಯಮಕ್ಕೆ ಗುರುವಾರದಿಂದ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದು, ರಫ್ತು ಸಂಬಂಧಿಸಿದ ಉದ್ಯಮ ಶೇಕಡ ನೂರರಷ್ಟು ಕಾರ್ಯನಿರ್ವಹಣೆಯ ಅನುಮತಿ ಪಡೆದಿದ್ದು, ಶೇಕಡ 50ರಷ್ಟು ಸಿಬ್ಬಂದಿ ಬಳಸಿ ಕಾರ್ಯ ನಿರ್ವಹಿಸಬಹುದಾಗಿದೆ. ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾವಿರ ಮಂದಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಲ್ಲಿ ಕೋವಿಡ್ 19 ಆರ್ಟಿ ಪಿಸಿಆರ್ ತಪಾಸಣೆ ಕಡ್ಡಾಯ. ಪ್ರತಿ ವಾರದಲ್ಲಿ ಎರಡು ಬಾರಿ ಕನಿಷ್ಠ ಶೇ.10ರಷ್ಟು ಸಿಬ್ಬಂದಿಗೆ ತಪಾಸಣೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.