ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ತಕ್ಷಣ ಬಿಡುಗಡೆ ಮಾಡಲು ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಮತ ಕ್ಷೇತ್ರದ ಸದಸ್ಯರ ಬೇಡಿಕೆಯನ್ನು ಉದ್ದೇಶಿಸಿ ಮಾತನಾಡಿ, ಅತಿಥಿ ಶಿಕ್ಷಕರ ಸಮಸ್ಯೆಯ ಅರಿವು ನನಗಿದೆ. ಇವರಿಗೆ ವೇತನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ಇತ್ತರು.
ಇಂದು ವಿಧಾನ ಪರಿಷತ್‌ನ ಬೆಳಗಿನ ಅವಧಿಯನ್ನು ಇದೇ ವಿಚಾರ ತಿಂದು ಹಾಕಿತ್ತು. ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪರಿಷತ್ ಸದಸ್ಯರ ಸಭೆ ಕೂಡ ನಡೆದಿತ್ತು. ಈ ವೇಳೆ ಸಿಎಂ ಭರವಸೆ ನೀಡಿ, ನಂತರ ಸದನದಲ್ಲಿ ಸಿಎಂ ಹಾಜರಾಗಿ ಭರವಸೆ ನೀಡಿದರು.