ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು, ಡೋಲಾಯಮಾನ ಸ್ಥಿತಿಯಲ್ಲಿರುವ ಅನರ್ಹ ಶಾಸಕರ ಭವಿಷ್ಯದ ಕುರಿತು ಹೈಕಮಾಂಡ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಅಡಕತ್ತರಿಯಲ್ಲಿ ಅನರ್ಹ ಶಾಸಕರು,ಹೈಕಮಾಂಡ್ ಜೊತೆ ಮಾತುಕತೆಗೆ ದೆಹಲಿಗೆ ಬಿಎಸ್ವೈ! - ಹೈಕಮಾಂಡ್ ಜೊತೆ ಮಾತುಕತೆಗೆ ದೆಹಲಿಗೆ ಸಿಎಂ
ಸ್ಪೀಕರ್ ಆದೇಶ ರದ್ದು,ಪ್ರಕರಣ ಇತ್ಯರ್ಥ ಆಗುವವರೆಗೆ ಚುನಾವಣೆಗೆ ತಡೆ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಪ್ರಯತ್ನ ನಡೆಸುವ ಸಂಬಂಧ ವಕೀಲರು ಮತ್ತು ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ.
ಇಂದು ರಾತ್ರಿ 10.20ಕ್ಕೆ ದೆಹಲಿಗೆ ತಲುಪಲಿರುವ ಬಿಎಸ್ವೈ, ವಕೀಲರನ್ನೂ ಭೇಟಿ ಮಾಡಿ ಚರ್ಚೆ ಅನರ್ಹ ಶಾಸಕರ ಪ್ರಕರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಗರದ ಅರಣ್ಯ ಭವನದ ಅತಿಥಿ ಗೃಹದಲ್ಲಿ ಅನರ್ಹ ಶಾಸಕರ ಜೊತೆ ಯಡಿಯೂರಪ್ಪ ಸಭೆ ನಡೆಸಿದ್ದರು.
ಈ ವೇಳೆ ಸಿಎಂ ಮತ್ತು ಬಿಜೆಪಿ ಧೋರಣೆಗೆ ಅನರ್ಹ ಶಾಸಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಅಧಿಕಾರಕ್ಕೆ ಬಂದ ನಂತರ ನಮ್ಮನ್ನು ಕಡೆಗಣಿಸಿದ್ದೀರಿ ಈಗ ನಾವು ನಿಜಕ್ಕೂ ಅತಂತ್ರರಾಗಿದ್ದೇವೆ, ಚುನಾವಣೆಗೆ ನಿಲ್ಲದಂತಾಗಿದೆ ಕೂಡಲೆ ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಅನರ್ಹ ಶಾಸಕರ ಒತ್ತಡ ಹೆಚ್ಚಿದ ಹಿನ್ನೆಲೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.