ಬೆಂಗಳೂರು: ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಹಾಗೂ ಡಾ.ಕೆ.ಸುಧಾಕರ್ ಮಧ್ಯೆ ಅಸಮಾಧಾನವಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಬ್ಬರು ಸಚಿವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿ ಯಶಸ್ವಿ ಸಂಧಾನ ಮಾಡಿದ್ದಾರೆ.
ಸಿಎಂ ಸಂಧಾನ ಸಫಲ: ರಾಮುಲು-ಸುಧಾಕರ್ ಮಧ್ಯೆ ಬಗೆಹರಿದ ಖಾತೆ ಕಗ್ಗಂಟು
'ನಾನು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಕೇಳಿದ್ದೆ. ಹಲವು ಕಾರಣದಿಂದ ನನಗೆ ಆರೋಗ್ಯ ಇಲಾಖೆ ನೀಡಿದ್ದರು. ಇದೀಗ ನನಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದು ಸಂತೋಷವಾಗಿದೆ. ಈ ಕುರಿತಾಗಿ ಯಾವುದೇ ಅಸಮಾಧಾನವಿಲ್ಲ' ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಸಿಎಂ ಸಂಧಾನ ಸಫಲ
ಇಂದು ತಮ್ಮ ಕಾವೇರಿ ನಿವಾಸಕ್ಕೆ ಇಬ್ಬರು ಸಚಿವರನ್ನು ಕರೆಸಿದ ಸಿಎಂ ಯಡಿಯೂರಪ್ಪ, ಖಾತೆ ಬದಲಾವಣೆ ಸಂಬಂಧ ಇದ್ದ ಗೊಂದಲವನ್ನು ನಿವಾರಿಸಿದರು. ಖಾತೆ ಬದಲಾವಣೆಯ ಅನಿವಾರ್ಯತೆಯನ್ನು ಶ್ರೀರಾಮುಲುಗೆ ಮನವರಿಕೆ ಮಾಡಿದರು. ಆ ಮೂಲಕ ಇಬ್ಬರೂ ಸಚಿವರ ಮಧ್ಯೆ ಇದ್ದ ಗೊಂದಲ, ವೈಮನಸ್ಸನ್ನು ಶಮನ ಮಾಡಿದರು.
ಬಳಿಕ ಇಬ್ಬರೂ ಸಚಿವರು ಮಾಧ್ಯಮದ ಮುಂದೆ ಬಂದು ಜಂಟಿ ಹೇಳಿಕೆ ನೀಡಿ, ಎಲ್ಲವೂ ಸರಿ ಇದ್ದು, ಖಾತೆ ಬದಲಾವಣೆ ಸಂಬಂಧ ಯಾವುದೇ ಗೊಂದಲ, ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಸಚಿವ ಶ್ರೀರಾಮುಲು ಮಾತನಾಡುತ್ತಾ, 'ನಾನು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಕೇಳಿದ್ದೆ. ಹಲವು ಕಾರಣದಿಂದ ನನಗೆ ಆರೋಗ್ಯ ಇಲಾಖೆ ನೀಡಿದ್ದರು. ಇದೀಗ ನನಗೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದು ಸಂತೋಷವಾಗಿದೆ. ನನಗೆ ಯಾವುದೇ ಅಸಮಾಧಾನವಿಲ್ಲ' ಎಂದು ಸ್ಪಷ್ಟಪಡಿಸಿದರು.
'ಸುಧಾಕರ್ ಸ್ವತಃ ವೈದ್ಯರಾಗಿದ್ದು ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊರೊನಾ ವಿರುದ್ದ ಹೋರಾಟದಲ್ಲಿ ಸುಧಾಕರ್ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ. ಈ ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಸಿಎಂ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ' ಎಂದರು.
'ಕೊರೊನಾ ವಿಚಾರದಲ್ಲಿ ಬೆಂಗಳೂರಿನ ಉಸ್ತುವಾರಿ ಸುಧಾಕರ್ ನೋಡಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಾಗಿದೆ. ಹಾಗಂತ ಇದು ಯಾರ ವೈಫಲ್ಯ ಅಂತ ಹೇಳುವುದಕ್ಕಾಗುವುದಿಲ್ಲ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಎರಡೂ ಖಾತೆ ಒಬ್ಬರ ಬಳಿ ಇದ್ರೆ ಸುಲಭ ನಿರ್ಧಾರ ತಗೋಬಹುದು ಅಂತ ಖಾತೆ ಬದಲು ಮಾಡಿದ್ದಾರೆ' ರಾಮುಲು ಸಮಜಾಯಿಷಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಒಂದೇ ಮಾತ್ರನಾ ಅಥವಾ ಹಿಂದುಳಿದ ವರ್ಗ ಇರುತ್ತಾ ಅನ್ನೋ ಪ್ರಶ್ನೆಗೆ ಅವರು ಯಾವುದೇ ಉತ್ತರ ಕೊಡದೆ ತೆರಳಿದರು.
ರಾಮುಲು ಡಿಪ್ರಮೋಟ್ ಆಗಿಲ್ಲ:
'ಶ್ರೀರಾಮುಲು ನನಗಿಂತ ಹಿರಿಯರು. ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿದ್ದಾರೆ. ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಕೆಳ ಹಂತದಲ್ಲಿ ಸಮನ್ವಯದ ಕೊರತೆ ಇದ್ದ ಕಾರಣ ಸಿಎಂ ಈ ತೀರ್ಮಾನ ಕೈಗೊಂಡಿದ್ದಾರೆ' ಎಂದು ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
'ಶ್ರೀರಾಮುಲು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ರಾಮುಲು ಅವರಿಗೆ ಬಹುದೊಡ್ಡ ಜವಾಬ್ದಾರಿಯನ್ನು ಸಿಎಂ ನೀಡಿದ್ದಾರೆ. ಅವರನ್ನು ಡಿಪ್ರಮೋಟ್ ಮಾಡಿಲ್ಲ' ಎಂದರು.
TAGGED:
ಸಿಎಂ ಯಡಿಯೂರಪ್ಪ ಸಂಧಾನ