ಬೆಂಗಳೂರು: ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಮಂಡ್ಯ ಜಿಲ್ಲೆಯ ಸಂಸದರು, ಶಾಸಕರು ಹಾಗೂ ರೈತ ಮುಖಂಡರ ಜೊತೆ ಸಿಎಂ ಸಭೆ ಮಂಡ್ಯ ಜಿಲ್ಲೆಯ ಸಂಸದರು, ಶಾಸಕರು ಹಾಗೂ ರೈತ ಮುಖಂಡರಿರುವ ನಿಯೋಗ ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತ್ತು. ಈ ವೇಳೆ ಐತಿಹಾಸಿಕ ಮಹತ್ವವುಳ್ಳ ಮಂಡ್ಯದ ಮೈ ಶುಗುರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು. ಜಿಲ್ಲೆಯ ರೈತರನ್ನು ಕಾಪಾಡಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.
ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪುಶ್ಚೇತನಗೊಳಿಸಲು ಸರ್ಕಾರ ಬದ್ಧವಾಗಿದ್ದು, ಸರ್ಕಾರವೇ ಕಾರ್ಖಾನೆಯ ಸಂಪೂರ್ಣ ನಿರ್ವಹಣೆ ಮಾಡುವುದರ ಸಾಧಕ-ಬಾಧಕಗಳ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸಭೆ ನಂತರ ಮಾತನಾಡಿದ ರೈತ ನಾಯಕಿ ಸುನಂದ ಜಯರಾಂ, ಯಾವುದೇ ಕಾರಣಕ್ಕೂ ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು. ಕಾರ್ಖಾನೆ ಚಾಲನೆ ಮಾಡಲು ಅಗತ್ಯ ಹಣಕಾಸು ಮತ್ತು ಸಿಬ್ಬಂದಿಯನ್ನು ಕೂಡಲೇ ಸರ್ಕಾರ ಒದಗಿಸಬೇಕು. ಇದುವರೆಗಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಸುಸ್ಥಿತಿಯಲ್ಲಿರುವ ಒಂದು ಮಿಲ್ಲನ್ನು ತಕ್ಷಣವೇ ಆರಂಭಿಸಿ ಕಬ್ಬನ್ನು ಅರೆಯಬೇಕು. ಪರ್ಯಾಯ ಆಧುನಿಕ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಪಿಎಸ್ಎಸ್ಕೆ ಕಾರ್ಖಾನೆಯನ್ನು ಖಾಸಗಿಯಿಂದ ಕೈಬಿಟ್ಟು ಸರ್ಕಾರ ಅನುದಾನ ನೀಡಿ ಸರ್ಕಾರಿ ಕಾರ್ಖಾನೆ ಸುಸ್ಥಿರಕ್ಕೆ ಕ್ರಮ ವಹಿಸಬೇಕೆಂಬ ಬೇಡಿಕೆ ಇಟ್ಟಿದ್ದೇವೆ. ಇದಕ್ಕೆ ಜಿಲ್ಲೆಯ ಶಾಸಕರು ಧ್ವನಿಗೂಡಿಸಿದ್ದಾರೆ. ಸಿಎಂ ಕೂಡ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಸಂಪುಟದಲ್ಲಿ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿ ಸಮಯ ಕೇಳಿದ್ದಾರೆ. ನಾವು ಕೂಡ ಸಮಯ ನೀಡಿದ್ದು, ಒಂದು ವೇಳೆ ನಮ್ಮ ಬೇಡಿಕೆ ವಿರುದ್ಧ ನಿರ್ಧಾರಕ್ಕೆ ಬಂದರೆ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.