ಬೆಂಗಳೂರು:ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದ್ದು, ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಮೆರಿಕದ ಕಂಪನಿಗಳಿಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮಂಗಳವಾರ ಆಯೋಜಿಸಿದ್ದ ವರ್ಚ್ಯುಯಲ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಮೆರಿಕ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದ ಅವರು, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅಮೆರಿಕದ ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಟ್ಟರು.
"ಕೊರೊನಾ ಆಘಾತದ ಜತೆಗೆ, ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧದ ಮೇಲೆ ಕರಿ ನೆರಳು ಆವರಿಸಿರುವ ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಹೆಚ್ಚಿದೆ. ಈ ಕಾರಣದಿಂದಾಗಿ ಅಮೆರಿಕದ ಕಂಪನಿಗಳಿಗೆ ಭಾರತ ನೆಚ್ಚಿನ ತಾಣವಾಗಲಿದೆ. ಅದರಲ್ಲೂ ಕೈಗಾರಿಕಾ ಸ್ನೇಹಿ ವಾತಾವರಣ ಇರುವ ಕರ್ನಾಟಕದ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಲಾಕ್ಡೌನ್ ನಂತರ ಆರ್ಥಿಕ ಪುನಶ್ಚೇತನಕ್ಕೆ ರಾಜ್ಯ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವಾಣಿಜ್ಯ ಚಟುವಟಿಕೆಗಳಿಗೆ ಪೂರಕ ವಾತಾರವಾರಣ ಕಲ್ಪಿಸಲಾಗಿದೆ,"ಎಂದು ಹೇಳಿದರು.
"ರಕ್ಷಣೆ ಮತ್ತು ವ್ಯೂಹಾತ್ಮಕ ವಿಷಯಗಳ ಒಪ್ಪಂದಗಳು ಮಾತ್ರವಲ್ಲದೇ ಭಾರತ ಮತ್ತು ಅಮೆರಿಕದ ಜನರ ನಡುವಿನ ಸಂಬಂಧವೂ ಪ್ರಬಲವಾಗಿದೆ. ಕಳೆದೆರಡು ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ವಹಿವಾಟು ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿದ್ದು, 2000 ಇಸವಿಯಲ್ಲಿ 19 ಶತಕೋಟಿ ಡಾಲರ್ನಷ್ಟಿದ್ದ ವಹಿವಾಟು ಪ್ರಮಾಣ 2020ರ ವೇಳೆಗೆ 149 ಶತಕೋಟಿ ಡಾಲರ್ಗೆ ತಲುಪಿದೆ. ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಲಯಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿರುವ ರಾಜ್ಯ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್, ಕೃಷಿ, ವಾಹನ ಮುಂತಾದ ನಾನಾ ಕ್ಷೇತ್ರಗಳನ್ನು ಉತ್ತೇಜಿಸಲು 'ಉದ್ಯಮ ನಿರ್ದಿಷ್ಟ ನೀತಿ' ಜಾರಿ ತರುವ ಮೂಲಕ ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಿದೆ," ಎಂದರು.
"ಅಮೆರಿಕದ ಬಂಡವಾಳ, ಆವಿಷ್ಕಾರ ಮತ್ತು ನವೀನ ತಂತ್ರಜ್ಞಾನದ ಜತೆಗೆ ನಮ್ಮ ನುರಿತ ಮಾನವ ಸಂಪನ್ಮೂಲ ಹಾಗೂ ನಮ್ಮಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳ ಸಂಯೋಜನೆಯಿಂದ ಕರ್ನಾಟಕ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ನಮ್ಮ ಸರ್ಕಾರ ಮೊದಲ ಆದ್ಯತೆ. ಅಮೆರಿಕ ಮತ್ತು ಭಾರತ ಪರಸ್ಪರ ಕೈ ಜೋಡಿಸುವ ಮೂಲಕ ಉತ್ತಮ ಸಹಭಾಗಿತ್ವ ಸಾಧಿಸಬಹುದು,"ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.