ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಈಗ 8 ದಿನವಾಯ್ತು. ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಷ್ಟಾದರೂ ಸರ್ಕಾರ ಮಾತ್ರ ಮಾತುಕತೆಗೆ ಮುಂದಾಗಿಲ್ಲ. ಬದಲಾಗಿ ಸಂಧಾನದ ಬಾಗಿಲನ್ನು ಮುಚ್ಚಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದೇ ಉಪ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. 6ನೇ ವೇತನ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯವ್ಯ ಸಾರಿಗೆ ನಿಗಮದ ಬಸ್ ಸಂಚಾರ ಸ್ಥಗಿತಗೊಂಡಿದೆ.
ಸಂಚಾರ ವ್ಯವಸ್ಥೆ ಏರುಪೇರಾಗಿದೆ. ಆದರೂ ಸರ್ಕಾರ ಮಾತ್ರ ಸಾರಿಗೆ ನೌಕರರ ಜೊತೆ ಮಾತುಕತೆಗೆ ಮುಂದಾಗಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈವರೆಗೂ ಮುಷ್ಕರಗಳು ಆರಂಭಗೊಳ್ಳುತ್ತಿದ್ದಂತೆ ಸಂಧಾನಕ್ಕೆ, ಮಾತುಕತೆಗೆ ಮುಂದಾಗಲು ಸೂಚಿಸುತ್ತಿದ್ದರು.
ಆದರೆ, ಈ ಬಾರಿ ಮಾತ್ರ ಅಂತಹ ಯಾವ ಪ್ರಯತ್ನವೂ ನಡೆದಿಲ್ಲ. ಸ್ವತಃ ಯಡಿಯೂರಪ್ಪ ಯಾರೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರಶ್ನಿಸುವ ಮೂಲಕ ಸಂಧಾನಕ್ಕೆ ತೆರೆ ಎಳೆದಿದ್ದಾರೆ. ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 8ರಿಂದ ನಾಲ್ಕು ದಿನಗಳ ಕಾಲ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.