ಬೆಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಸ್ಥಾನವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೂ ಆ್ಯಪ್ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಇಂತಹ ಪ್ರಯತ್ನಗಳು ಹೆಚ್ಚಾಗಲಿ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರೋತ್ಸಾಹಿಸಿದ್ದಾರೆ.
ಕೂ ಆ್ಯಪ್ ವತಿಯಿಂದ ವರ್ಚುವಲ್ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಕೂ ಆ್ಯಪ್ ಅನ್ನು ಟ್ವಿಟರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಮಾತೃಭಾಷೆಯಲ್ಲೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅನುಕೂಲವಾಗುವ ರೀತಿಯಲ್ಲಿ ಈ ಆ್ಯಪ್ ಅನ್ನು ತಯಾರಿಸಿದ್ದಾರೆ. ಕನ್ನಡದವರೇ ಆದ ಅಪ್ರಮೇಯ ಅವರು ಈ ಪ್ರಯತ್ನ ನಡೆಸಿರುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೆ, ಇತ್ತೀಚೆಗೆ ಪ್ರಧಾನಿ ಅವರು 'ಆತ್ಮ ನಿರ್ಭರ್ ಸ್ಪರ್ಧೆ' ಆಯೋಜಿಸಿ ದೇಶಾದ್ಯಂತ ಈ ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಎಲ್ಲವನ್ನು ಹಿಂದಿಕ್ಕಿ ಕೂ ಆ್ಯಪ್ ಮೊದಲ ಸ್ಥಾನ ಪಡೆದುಕೊಂಡಿರುವುದು ರಾಜ್ಯದ ಕೀರ್ತಿ ಹೆಚ್ಚಿಸಿದಂತಾಗಿದೆ.