ಬೆಂಗಳೂರು :ಇಂದು ಸಿಎಂ ಯಡಿಯೂರಪ್ಪ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಭೆ ನಡೆಸಿದರು. ಈ ವೇಳೆ ಅಧ್ಯಕ್ಷರುಗಳು ಶಾಸಕರಿಗೆ ನೀಡಿರುವಂತೆ ನಮಗೂ ಗನ್ ಮ್ಯಾನ್ಗಳ ಸೌಲಭ್ಯ ಕೊಡಬೇಕು ಎನ್ನುವ ಬೇಡಿಕೆಯನ್ನಿಟ್ಟರು. ಇದಕ್ಕೆ ಸಿಎಂ ಅಸಮ್ಮತಿ ಸೂಚಿಸಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದ 30 ಜಿಲ್ಲೆಯ ಪಂಚಾಯತ್ ಅಧ್ಯಕ್ಷರು ಭಾಗಿಯಾಗಿದ್ದರು. ಮೊದಲ ಬಾರಿಗೆ ಸಿಎಂ ಭೇಟಿ ಮಾಡಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಮಗೂ ಗನ್ಮ್ಯಾನ್ಗಳ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟರು. ಆದರೆ, ಇವರ ಬೇಡಿಕೆಗೆ ಬಗ್ಗೆ ಗಮನ ಕೊಡದ ಸಿಎಂ ಬಿಎಸ್ವೈ ಅಯ್ಯೋ ಅದು ಬಿಟ್ಟು, ಮುಂದೆ ಹೇಳಪ್ಪ ಎಂದರು.
ಅನುದಾನ ಕೇಳಲು ಬಂದು ವೇತನ ನೀಡಿದರು:
ಸಭೆಯಲ್ಲಿ ಸಿಎಂ ಜೊತೆ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿಗಳಿಗೆ ಸರ್ಕಾರದಿಂದ ಬರುವ ಅನುದಾನ ಕಡಿಮೆಯಾಗುತ್ತಿದೆ. ಇದರಿಂದ ಜಿಲ್ಲೆಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಅಧ್ಯಕ್ಷರ ಮನವಿ ಕೇಳಿದ ಮುಖ್ಯಮಂತ್ರಿ ಈ ಬಾರಿ ಅನುದಾನ ಕೊಡಲು ನಮಗೆ ಸ್ವಲ್ಪ ಕಷ್ಟ ಆಗುತ್ತಿದೆ. ಆದ್ದರಿಂದ ಕೆಲವು ತಿಂಗಳು ನಮಗೆ ಸಹಕರಿಸಿ ಅತಿವೃಷ್ಠಿಯಿಂದ ಆದ ಅನಾಹುತವನ್ನು ಸರಿ ಪಡಿಸೋಣ ನಂತರ ತಾವು ಕೇಳಿದ ಅನುದಾನ ನೀಡುತ್ತೇನೆ ಅಂತಾ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಜಿಲ್ಲಾ ಪಂಚಾಯತಿ ಅಧ್ಯಕ್ಷರುಗಳು ಅತಿವೃಷ್ಠಿಗೆ ನಮ್ಮ ಒಂದು ತಿಂಗಳ ವೇತನವನ್ನು ಸಹ ನೀಡುತ್ತೇವೆ ಎಂದು ಘೋಷಣೆ ಮಾಡಿದರು.