ಬೆಂಗಳೂರು:ಕೊರೊನಾ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಾಗ ಶಾಸಕರು ಹಾಗೂ ಪಾಲಿಕೆ ಸದಸ್ಯರನ್ನು ತೊಡಗಿಸಿಕೊಂಡು ಮುಂದುವರೆಯಿರಿ ಎಂದು ಬೆಂಗಳೂರು ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚವರಾದ ಆರ್.ಅಶೊಕ್, ಸಚಿವ ವಿ. ಸೋಮಣ್ಣ, ಗೋಪಾಲಯ್ಯ, ಸೋಮಶೇಖರ್, ನಾರಾಯಣ ಗೌಡ, ಬೈರತಿ ಬಸವರಾಜ್, ಸುರೇಶ್ ಕುಮಾರ್ ಭಾಗಿಯಾಗಿದ್ದರು.
ಸಚಿವರ ಸಭೆಯಲ್ಲಿ ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡವರ ಬಗ್ಗೆ ಚರ್ಚೆ ನಡೆಯಿತು. ಬೆಂಗಳೂರಿನಿಂದ ಯಾರು ಯಾರು ಹೋಗಿದ್ರು, ಆ ಬಗ್ಗೆ ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್ ಮಾಡಿಸೋ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಜೊತೆಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೊರೊನಾ ತಡೆಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.
ಈ ವೇಳೆ ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಸಚಿವರು ಸಿಎಂಗೆ ನೀಡಿದರು. ಕ್ಷೇತ್ರದಲ್ಲಿ ಸದ್ಯ ಯಾವ ರೀತಿ ಪರಿಸ್ಥಿತಿ ಇದೆ, ಎಷ್ಟು ಮಂದಿ ಕೊರೊನಾ ಪಾಸಿಟಿವ್ ಇದ್ದಾರೆ, ಎಷ್ಟು ಜನ ಕ್ವಾರಂಟೈನ್‌ನಲ್ಲಿ ಇದ್ದಾರೆ, ಕೊರೊನಾ ನಿಯಂತ್ರಣಕ್ಕೆ ಕ್ಷೇತ್ರಗಳಲ್ಲಿ ತೆಗೆದುಕೊಂಡಿರೋ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಬೆಂಗಳೂರಿನ ಸಚಿವರಾಗಿ ವೈರಸ್ ತಡೆಯಲು ಏನು ಕ್ರಮ ಮಾಡಬೇಕು ಎಂಬುದು ಪ್ರಮುಖ. ಬೀದಿ ಬೀದಿಗಳಲ್ಲಿ ಔಷಧಿ ಸಿಂಪಡಣೆ ಮಾಡಬೇಕು, ಶಾಸಕರು, ಕಾರ್ಪೊರೇಟರ್ಸ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅವರನ್ನೂ ಕೊರೊನಾ ನಿಯಂತ್ರಣ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎನ್ನುವುದು ಸೇರಿದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸಚಿವರಿಗೆ ಸೂಚನೆ ನೀಡಿದರು.