ಕರ್ನಾಟಕ

karnataka

ETV Bharat / state

ರೈತರೊಂದಿಗೆ ಸಿಎಂ ಸಂಧಾನ ಸಭೆ ವಿಫಲ ; ಸೆ.28ರಂದು ಕರ್ನಾಟಕ ಬಂದ್​ಗೆ ನಿರ್ಧಾರ - cm yadiyurappa meeting with farmers

ಕಾಯ್ದೆ ವಿರೋಧಿಸಿ ಸೆ. 28ಕ್ಕೆ ಕರ್ನಾಟಕ ಬಂದ್​​ ನಡೆಸಲು ಪ್ರತಿಭಟನಾಕಾರರು ತೀರ್ಮಾನ ಕೈಗೊಂಡರು. ಸಿಎಂ ಸಭೆ ನಂತರ ಮಾತನಾಡಿದ ರೈತ ನಾಯಕ ಮಾರುತಿ ಮಾನ್ಪಡೆ, ಸಿಎಂ ಸಮಜಾಯಿಷಿಗೆ ಒಪ್ಪಲು ಸಾಧ್ಯವಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯ ಮಾಡಿದ್ದೇವೆ..

cm yadiyurappa meeting with farmers failed
ರೈತರೊಂದಿಗೆ ಸಿಎಂ ಸಂಧಾನ ಸಭೆ ವಿಫಲ

By

Published : Sep 25, 2020, 7:09 PM IST

ಬೆಂಗಳೂರು :ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಬಂದ್​ಗೆ​ ಕರೆ ನೀಡಿದ್ದ ರೈತ ಮುಖಂಡರ ಜೊತೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ. ಸೆಪ್ಟೆಂಬರ್ 28 ರಂದು ಕರ್ನಾಟಕ ಬಂದ್ ನಡೆಸುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದಿರಲು ರೈತ ಸಂಘಟನೆಗಳು ನಿರ್ಧರಿಸಿವೆ.

ರೈತರೊಂದಿಗೆ ಸಿಎಂ ನಡೆಸಿದ ಸಂಧಾನ ಸಭೆ ವಿಫಲ
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ರೈತ ಸಂಘಟನೆಗಳ ಮುಖಂಡರ ನಿಯೋಗದ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ರೈತರ ಮನವಿಗೆ ಸ್ಪಂದಿಸದ ಸಿಎಂ, ಕಾಯ್ದೆಯಲ್ಲಿ ಯಾವುದೇ ಬದಲಾವಣೆಗೆ ಒಪ್ಪಲಿಲ್ಲ. ಜಮೀನು ಹೊಂದುವ ಮಿತಿ ಕಡಿಮೆ ಮಾಡುವ ಬಗ್ಗೆ ಮಾತ್ರ ಭರವಸೆ ನೀಡಿದರು. ಆದರೆ, ಇದಕ್ಕೊಪ್ಪದ ರೈತರು, ರೈತರಲ್ಲದವರು ಜಮೀನು ಖರೀದಿ ಮಾಡಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು. ಆದರೆ, ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿ ರೈತರ ಅನುಕೂಲಕ್ಕಾಗಿಯೇ ಈ ಕಾಯ್ದೆ ತಂದಿರುವುದಾಗಿ ಸಮರ್ಥಿಸಿಕೊಂಡರು.
ಸರ್ಕಾರ ಕಾಯ್ದೆ ವಿಚಾರದಲ್ಲಿ ತನ್ನ ನಿಲುವು ಬದಲಿಸಿಕೊಳ್ಳದ ಹಿನ್ನೆಲೆ ಸಿಎಂ ಜೊತೆಗಿನ ಸಂಧಾನ ಸಭೆ ವಿಫಲಗೊಂಡಿತು. ಕಾಯ್ದೆ ವಿರೋಧಿಸಿ ಸೆ. 28ಕ್ಕೆ ಕರ್ನಾಟಕ ಬಂದ್​​ ನಡೆಸಲು ಪ್ರತಿಭಟನಾಕಾರರು ತೀರ್ಮಾನ ಕೈಗೊಂಡರು. ಸಿಎಂ ಸಭೆ ನಂತರ ಮಾತನಾಡಿದ ರೈತ ನಾಯಕ ಮಾರುತಿ ಮಾನ್ಪಡೆ, ಸಿಎಂ ಸಮಜಾಯಿಷಿಗೆ ಒಪ್ಪಲು ಸಾಧ್ಯವಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯ ಮಾಡಿದ್ದೇವೆ. ಅವರು ನಮಗೆ ಉಪದೇಶ ಮಾಡಲು ಬಂದಿದ್ದರು. ಅದನ್ನು ನಾವು ಒಪ್ಪಿಕೊಂಡಿಲ್ಲ. ಕರ್ನಾಟಕ ಬಂದ್ ಮಾಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ರೈತ ಮುಖಂಡ ಕೊಡಗಲ್‌ ಪುರ ನಾಗೇಂದ್ರ ಮಾತನಾಡಿ, ನಾವು ಸಿಎಂ ಮನವಿಗೆ ಸ್ಪಂದಿಸಲ್ಲ. 28ರ ಬಂದ್ ಮಾಡಿಯೇ ಮಾಡುತ್ತೇವೆ. ಪ್ರತಿ ಊರಲ್ಲಿ ಬಿಜೆಪಿ ಸರ್ಕಾರದ ವಿರುದ್ಧವಾಗಿ ಮನೆ ಮನೆಯಿಂದ ಹೋರಾಟ ಆರಂಭ ಮಾಡುತ್ತೇವೆ ಎಂದರು.ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿಲ್​​ಗಳನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಹಂತದಲ್ಲಿಯೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅವರು ಮೋದಿ ಮಾತು ಮೀರಲು ಸಿದ್ಧರಿಲ್ಲ. ಹಾಗಾಗಿ, ನಾವು ಸೆ.28ರ ಬಂದ್​​ಗೆ ಮುಂದಾಗಿದ್ದೇವೆ. ರೈತರ ಅನ್ನ ಅವಲಂಬಿಸಿದ ಎಲ್ಲರೂ ಬಂದ್​ಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ABOUT THE AUTHOR

...view details