ಬೆಂಗಳೂರು: ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಷ್ಟೇ ಪ್ರವಾಹ ಆಗಿದ್ಯಾ? ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಪ್ರವಾಹ ಆಗಿಲ್ವಾ?, ಇಂತದ್ದೊಂದು ಪ್ರಶ್ನೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನಡೆಸಿದ ಶಾಸಕರ ಸಭೆಯಿಂದಾಗಿ ಉದ್ಭವವಾಗಿದೆ.
ಬೆಳಗಾವಿ, ಬಾಗಲಕೋಟೆ ಸೇರಿ ಕೆಲ ಜಿಲ್ಲೆಗಳ ನೆರೆಹಾನಿ ಕುರಿತ ಸಭೆಗೆ ಕಾಂಗ್ರೆಸ್ ಶಾಸಕರನ್ನು ಆಹ್ವಾನಿಸದೇ ಬರೀ ಬಿಜೆಪಿ ಶಾಸಕರನ್ನಷ್ಟೇ ಕರೆಸಿಕೊಂಡು ಸಿಎಂ ಪ್ರವಾಹದ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚಿಸಿದರು.
ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಷ್ಟೇ ಅಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಲ್ಲೂ ಪ್ರವಾಹ ಆಗಿದೆ. ಆದರೆ, ಸಿಎಂ ಈಗ ಪ್ರವಾಹ ಆಗಿರುವ ಭಾಗದ ಬಿಜೆಪಿ ಶಾಸಕರ ಜೊತೆ ಮಾತ್ರ ಸಭೆ ನಡೆಸಿದ್ದಾರೆ. ಕೇವಲ ಬಿಜೆಪಿ ಪಕ್ಷದ ಶಾಸಕರು ಇರುವ ಕ್ಷೇತ್ರಗಳಲ್ಲಿ ಮಾತ್ರ ಪ್ರವಾಹದ ಸಮಸ್ಯೆ ಕೇಳಿದ್ರೆ ಸಾಕಾ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಹ ದೂರ ಇಟ್ಟು ಬರೀ ಬಿಜೆಪಿ ಶಾಸಕರ ಜೊತೆಗೆ ಸಭೆ ನಡೆಸಿದ್ದು, ಮತ್ತಷ್ಟು ಅನುಮಾನ ಹೆಚ್ಚಿಸಿದೆ.
ಕೇಂದ್ರದ ಅನುದಾನಕ್ಕೆ ಒತ್ತಾಯ:ನೆರೆಪೀಡಿತ ಪ್ರದೇಶಗಳ ಪರಿಹಾರ ಕಾರ್ಯಾಚರಣೆ ವಿಳಂಬವಾಗುತ್ತಿದೆ. ರಾಜ್ಯದಲ್ಲಿ ಹಣಕಾಸಿನ ಕೊರತೆ ಇದ್ದು, ಕೂಡಲೇ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಬೆಳಗಾವಿ ಶಾಸಕರು ಒತ್ತಾಯ ಮಾಡಿದ್ದಾರೆ.
ಕೇಂದ್ರದಿಂದ ಅನುದಾನ ವಿಳಂಬ ವಿಚಾರಕ್ಕೆ ಸಿಎಂ ಸಭೆಯಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದರು. ಪರಿಹಾರ ಕಾರ್ಯಗಳಿಗೆ ಸೂಕ್ತ ಹಣ ಸಿಗದೇ ಇರುವುದಕ್ಕೆ ಅಸಮಾಧಾನ ಹೊರಹಾಕಿದ ಶಾಸಕರು, ಬೆಳಗಾವಿ ಭಾಗದಲ್ಲಿ ಹೆಚ್ಚು ಪ್ರವಾಹ ಆಗಿದೆ. ಪ್ರವಾಹದಿಂದ ನಮ್ಮ ಜಿಲ್ಲೆಯಲ್ಲೇ ಹೆಚ್ಚು ನಷ್ಟ ಉಂಟಾಗಿದೆ. ಚಾಲ್ತಿಯಲ್ಲಿರುವ ಪರಿಹಾರ ಕಾಮಗಾರಿಗಳು ಕೂಡ ಆಮೆಗತಿಯಲ್ಲಿ ನಡೆಯುತ್ತಿವೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡುವುದಾಗಿ ಸರ್ಕಾರ ಹೇಳಿದೆ. ಆದರೆ, ಈವರೆಗೂ ಮನೆ ನಿರ್ಮಾಣ ಯುದ್ದೋಪಾದಿಯಲ್ಲಿ ಸಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡು ಪರದಾಡುತ್ತಿರುವ ಸಂತ್ರಸ್ತರಿಗೆ, ಸರ್ಕಾರ ಕೊಡುತ್ತಿರುವ ಹತ್ತು ಸಾವಿರ ರೂ. ಯಾವುದಕ್ಕೂ ಸಾಲುತ್ತಿಲ್ಲ. ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ನೀಡುತ್ತಿರುವ 5 ಲಕ್ಷ ರೂಪಾಯಿ ಅನುದಾನವನ್ನು ಇನ್ನೂ ಹೆಚ್ಚಿಸಬೇಕು. ಅಲ್ಲದೇ, ಪರಿಹಾರ ಕಾರ್ಯಗಳು ಹಾಗೂ ಕಾಮಗಾರಿಗೆ ತಕ್ಷಣ ಹಣ ಬಿಡುಗಡೆ ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ, ಕನಿಷ್ಠ ಪಕ್ಷ ಮನೆಯ ಪೌಂಡೇಷನ್ ಆದರೂ ಹಾಕಲಿ. ಜೊತೆಗೆ ತಾತ್ಕಾಲಿಕವಾಗಿ ಶೆಡ್ ಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡು ಹಣ ಬಿಡುಗಡೆಗೊಳಿಸಬೇಕು ಎಂದು ಸಿಎಂಗೆ ಶಾಸಕರು ಮನವಿ ಮಾಡಿದ್ದಾರೆ.