ಬೆಂಗಳೂರು: ನೀರಾವರಿ ಯೋಜನೆಗಳಲ್ಲಿ ಹಗರಣ ಆರೋಪ ಕೇಳಿ ಬಂದಿರುವ ಹಿನ್ನೆಲೆ, ಮಾಜಿ ಸಚಿವ ಡಿ.ಕೆ ಶಿವಕುಮಾರ್ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.
ಮೈತ್ರಿ ಸರ್ಕಾರದ ಅವಧಿಯಲ್ಲಿನ ಯೋಜನೆಗಳ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಡಿಕೆಶಿ ಈಗಾಗಲೇ ಇಡಿ ಬಂಧನದಲ್ಲಿದ್ದು, ಈಗ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ದೋಸ್ತಿ ಸರ್ಕಾರದಲ್ಲಿ ನಿಯಮ ಮೀರಿ ಜಲಸಂಪನ್ಮೂಲ ಇಲಾಖೆಯಲ್ಲಿ ಟೆಂಡರ್ ನೀಡಲಾಗಿದೆ. 8 ಸಾವಿರ ಕೋಟಿ ಇದ್ದ ಬಜೆಟ್ ಮೊತ್ತವನ್ನು ಅಕ್ರಮವಾಗಿ 23 ಸಾವಿರ ಕೋಟಿಗೆ ಏರಿಕೆ ಮಾಡಲಾಗಿದೆ. ಸಭೆ ನಡೆಸದೇ ನೀರಾವರಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ನೀರಾವರಿ ಇಲಾಖೆಯಲ್ಲಿ ಮೇಲ್ನೋಟಕ್ಕೆ ಭ್ರಷ್ಟಾಚಾರ ಎಸಗಿರುವ ಆರೋಪ ಕಂಡುಬಂದಿದೆ ಎನ್ನಲಾಗಿದ್ದು, ಈ ಹಗರಣ ಬಗ್ಗೆ ತನಿಖೆಗೆ ಆದೇಶಿಸಲು ಸಿಎಂ ಬಿಎಸ್ವೈ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸೇಡಿನ ರಾಜಕಾರಣ ಮಾಡಲ್ಲ ಎನ್ನುವ ಹೇಳಿಕೆ ನೀಡುತ್ತಲೇ ಈಗಾಗಲೇ ಮೈತ್ರಿ ಸರ್ಕಾರದ ಹಲವು ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ತನಿಖೆಗೆ ಆದೇಶಿಸಿರುವ ಸಿಎಂ ಬಿಎಸ್ವೈ, ಅನ್ನಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್, ಬೆಂಗಳೂರು ರಸ್ತೆಗಳ ವೈಟ್ ಟ್ಯಾಪಿಂಗ್, ಬಿಬಿಎಂಪಿ ಕಸ ವಿಲೇವಾರಿ ಕುರಿತ ಹಗರಣದ ಬಳಿಕ ಇದೀಗ ನೀರಾವರಿ ಇಲಾಖೆಯಲ್ಲಿ ನಡೆದಿರುವ ಹಗರಣ ಬಗ್ಗೆ ತನಿಖೆಗೆ ಮುಂದಾಗುತ್ತಿದ್ದಾರೆ.