ಕರ್ನಾಟಕ

karnataka

ETV Bharat / state

ಜನವರಿ 4, 5 ರಂದು ಬಜೆಟ್‌ಪೂರ್ವ ಶಾಸಕರ ಸಭೆ ಕರೆದ ಸಿಎಂ - pre budget review meeting

ಜನವರಿ 4 ಮತ್ತು 5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಪೂರ್ವ ಸಮಾಲೋಚನಾ ಸಭೆ ಕರೆದಿದ್ದಾರೆ. ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಒಟ್ಟು 119 ಶಾಸಕರು ಭಾಗಿಯಾಗಲಿದ್ದಾರೆ.

cm yadiyurappa calls consultation meeting for mla
ಸಮಾಲೋಚನಾ ಸಭೆ ಕರೆದ ಸಿಎಂ

By

Published : Dec 30, 2020, 2:15 PM IST

ಬೆಂಗಳೂರು: 2021-22 ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ಸಲುವಾಗಿ ಬಜೆಟ್ ಪೂರ್ವ ಸಮಾಲೋಚನಾ ಸಭೆ ಕರೆದಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ 30 ಜಿಲ್ಲೆಗಳ 119 ಶಾಸಕರು ಭಾಗಿಯಾಗಲಿದ್ದಾರೆ. ಜನವರಿ 4 ಮತ್ತು 5 ರಂದು ನಗರದ ಕ್ಯಾಪಿಟಲ್ ಹೋಟೆಲ್​ ನಡೆಯಲಿರುವ ಬಜೆಟ್ ಮುನ್ನ ಸಮಾಲೋಚನಾ ಸಭೆಯಲ್ಲಿ ಬಿಜೆಪಿಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಜನವರಿ 4 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯೋ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ 17 ಶಾಸಕರು ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಸಭೆಯಲ್ಲಿ ಮುಂಬೈ ಮತ್ತು ಮಧ್ಯ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಜಿಲ್ಲೆಯ 35 ಶಾಸಕರು ಭಾಗಿಯಾಗಲಿದ್ದಾರೆ ಸಂಜೆ 6.30 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿರುವ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 12 ಶಾಸಕರು ಭಾಗಿಯಾಗಲಿದ್ದಾರೆ.

ಜನವರಿ 5ರಂದು ಮಧ್ಯಾಹ್ನ 12 ಗಂಟೆಯಿಂದ 1.30 ರವರೆಗೆ ಮಧ್ಯ ಕರ್ನಾಟಕ, ಮೈಸೂರು ಭಾಗದ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ 29 ಶಾಸಕರು ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿರುವ ಸಭೆಯಲ್ಲಿ ಕೇಂದ್ರ ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ 26 ಶಾಸಕರು ಭಾಗಿಯಾಗಲಿದ್ದಾರೆ.

2020-21 ನೇ ಸಾಲಿನ ಬಜೆಟ್​ನಲ್ಲಿ ಸರಿಯಾಗಿ ಅನುದಾನ ಲಭ್ಯವಾಗಿಲ್ಲ, ಕ್ಷೇತ್ರದ ಕೆಲಸಗಳು ಆಗಿಲ್ಲ, ಕೇವಲ ಕೊರೊನಾ ಕಾರಣ ಮುಂದಿಟ್ಟು ಅನುದಾನ ನೀಡಿಲ್ಲ ಎಂದು ಬಿಜೆಪಿ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿಯೂ ಕೆಲ ಶಾಸಕರು ಪ್ರಸ್ತಾಪ ಮಾಡಿದ್ದಾರೆ. ಇದೇ ಕಾರಣಕ್ಕೆ ಸಿಎಂ ಜೊತೆ ಕೆಲ ಶಾಸಕರು ಮುನಿಸಿಕೊಂಡಿರುವ ನಿದರ್ಶನಗಳೂ ಇವೆ. ಈ ಎಲ್ಲಾ ಕಾರಣಗಳಿಂದಾಗಿ ಶಾಸಕರ ಅಭಿಪ್ರಾಯ ಪಡೆದುಕೊಳ್ಳಲು ಸಿಎಂ ಸಮಾಲೋಚನಾ ಸಭೆ ಕರೆದಿದ್ದಾರೆ.

ಆಯಾ ಜಿಲ್ಲೆಗಳ ಶಾಸಕರು ಸಮಾಲೋಚನಾ ಸಭೆಯಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳು, ಆಗಬೇಕಾಗಿರುವ ಯೋಜನೆಗಳು, ಬೇಕಿರುವ ಅನುದಾನದ ಮೊತ್ತ ಸೇರಿದಂತೆ ಎಲ್ಲ ವಿವರಗಳನ್ನು ಮುಖ್ಯಮಂತ್ರಿಗಳ ಜೊತೆ ಹಂಚಿಕೊಳ್ಳಲಿದ್ದು, ಶಾಸಕರ ಅಭಿಪ್ರಾಯಗಳನ್ನು ಪರಿಗಣಿಸಿ ಬಜೆಟ್​​ನಲ್ಲಿ ಆದ್ಯತೆ ನೀಡುವ ಚಿಂತನೆಯನ್ನೂ ಸಿಎಂ ನಡೆಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details