ಬೆಂಗಳೂರು:ಮಹಿಳಾ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರೂಪಿಸಲಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸೇಫ್ ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ ಸುಸಜ್ಜಿತ ಬಹುಮಹಡಿ ಕಮಾಂಡ್ ಸೆಂಟರ್ ನಿರ್ಮಿಸಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ನಿರ್ಭಯಾ ಯೋಜನೆಯಡಿ ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಖನೌ ಹಾಗೂ ಮುಂಬೈ ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಜಾರಿಯಾಗುತ್ತಿದೆ. ಈ ನಗರಗಳ ಪೈಕಿ ಕಮಾಂಡ್ ಸೆಂಟರ್ನ್ನೂ ವೇಗದಲ್ಲಿ ನಿರ್ಮಿಸಿ ಬೆಂಗಳೂರಿನಲ್ಲಿ ಮೊದಲು ಅನುಷ್ಠಾನಗೊಳಿಸಲಾಗುತ್ತಿದೆ.
ರಾಜಧಾನಿಯಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಆತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣ ತಡೆದು ಮಹಿಳೆಯರಲ್ಲಿ ಸುರಕ್ಷತೆ ಭಾವ ಮೂಡಿಸುವುದು ಯೋಜನೆಯ ಮೊದಲ ಉದ್ದೇಶವಾಗಿದೆ. ಇದರೊಂದಿಗೆ ಕಳ್ಳತನ, ಸುಲಿಗೆ, ಸರಗಳ್ಳತನ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿದ್ದು, ಅಪರಾಧ ಚಟುವಟಿಕೆ ನಿಯಂತ್ರಿಸಲು ಈ ಯೋಜನೆ ಸಹಕಾರಿಯಾಗಲಿದೆ.
7500 ಆತ್ಯಾಧುನಿಕ ಕ್ಯಾಮೆರಾ ಅಳವಡಿಕೆ:ಸೇಫ್ ಸಿಟಿ ಯೋಜನೆಯಡಿ ವಾಹನ ದಟ್ಟಣೆ ಹಾಗೂ ಜನದಟ್ಟಣೆ ಅಧಿಕವಿರುವ ಪ್ರದೇಶ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶ ಸೇರಿ 3 ಸಾವಿರ ಜಾಗಗಳಲ್ಲಿ ಈಗಾಗಲೇ ಸುಮಾರು 3500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಇನ್ನೂ 4500 ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಒಟ್ಟು 7500 ಆತ್ಯಾಧುನಿಕ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಮಾಂಡ್ ಸೆಂಟರ್ ವಿಶೇಷತೆ ಏನು?ನಗರದ ವಿವಿಧ ಕಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ನೇರ ಸಂಪರ್ಕ ಕಮಾಂಡ್ ಸೆಂಟರ್‌ನಲ್ಲಿ ಇರಲಿದೆ. 24 ಗಂಟೆ ಕಾಲ ಇಲ್ಲಿನ ಸಿಬ್ಬಂದಿ ನಗರದ ಚಲನವಲನd ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಕಿರುಕುಳ, ಅಸಭ್ಯ ವರ್ತನೆ, ಚುಡಾಯಿಸುವುದು ಸೇರಿದಂತೆ ಅಪರಾಧ ಕೃತ್ಯ ನಡೆಯುತ್ತಿದ್ದರೆ, ಕ್ಯಾಮೆರಾಗಳು ವಿಡಿಯೋ ಸೆರೆಹಿಡಿದು ತತ್ಕ್ಷಣ ಆಯಾ ಪೊಲೀಸ್ ಠಾಣೆ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸಲಿವೆ. ತಕ್ಷಣ ಪೊಲೀಸರಿಂದ ಆರೋಪಿಗಳನ್ನ ತ್ವರಿತಗತಿಯಲ್ಲಿ ಹಿಡಿಯುವ ಕೆಲಸವಾಗಲಿದೆ.