ಬೆಂಗಳೂರು :ಮಹತ್ವದ ಚರ್ಚೆ ಆರಂಭವಾಗುವ ಸೂಚನೆ ಸಿಗುತ್ತಿದ್ದಂತೆ ಎದ್ದು ಹೊರನಡೆದ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಾಕಷ್ಟು ಗರಂ ಆದ ಪ್ರಸಂಗ ನಡೆಯಿತು.
ವಿಧಾನಪರಿಷತ್‍ನಲ್ಲಿ ಗಮನ ಸೆಳೆಯುವ ಸೂಚನೆಯಡಿ ರಾಜ್ಯದಲ್ಲಿ ವಿದ್ಯುತ್ ತಯಾರಿಕಾ ಸಂಸ್ಥೆಗಳಿಂದ ಖರೀದಿಸಲಾಗುವ ವಿದ್ಯುತ್ ಖರೀದಿ ಬೆಲೆಯನ್ನು ರಾಜ್ಯ ವಿದ್ಯುತ್ ಶಕ್ತಿ ರೆಗ್ಯುಲೇಟರಿ ಕಮೀಷನ್ ಅವೈಜ್ಞಾನಿಕವಾಗಿ ಕಡಿಮೆ ಮಾಡಿರುವುದಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
ಈ ಹಿಂದೆ ನಿಗದಿ ಮಾಡಿದ್ದ ದರದಲ್ಲಿಯೇ ಖರೀದಿ ಮಾಡಬೇಕೆಂದು ಆದೇಶ ನೀಡಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೇ ಹೆಸ್ಕಾಂ ಸಂಸ್ಥೆಯು ಹೊಸ ದರವನ್ನು ವಿದ್ಯುತ್ ಸರಬರಾಜುದಾರರಿಗೆ ನೀಡುತ್ತಿರುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮುಂದಾಗಿದ್ದರು.
ಈ ವಿಚಾರದ ಮೇಲೆ ಇವರ ಜತೆ ಪ್ರತಿಪಕ್ಷ ಸಚೇತನ ಎಂ. ನಾರಾಯಣಸ್ವಾಮಿ, ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಬಿಜೆಪಿ ಸದಸ್ಯ ಹಣಮಂತ ನಿರಾಣಿ ಮಾತನಾಡಬೇಕಿತ್ತು.
ಸಿಎಂ ಬಿ.ಎಸ್. ಯಡಿಯೂರಪ್ಪ ವಿಧಾನ ಪರಿಷತ್‍ಗೆ ಆಗಮಿಸಿದ್ದರು. ಎರಡು ದಿನದಿಂದ ಈ ವಿಚಾರವನ್ನು ಸಿಎಂ ಎದುರೇ ಪ್ರಸ್ತಾಪಿಸಬೇಕೆಂದು ಕಾದಿದ್ದ ಪ್ರತಿಪಕ್ಷ ನಾಯಕರು, ಸಿಎಂ ಆಗಮಿಸಿದ ಸಂದರ್ಭ ಬಜೆಟ್ ಮೇಲೆ ಮಾತನಾಡುತ್ತಿದ್ದ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್‍ಗೂ ಬೇಗ ಮುಗಿಸುವಂತೆ ಮನವಿ ಮಾಡಿದ್ದರು.
ಒಮ್ಮೆ ಎದ್ದು ಹೊರಹೋಗಿದ್ದ ಸಿಎಂ ವಾಪಸ್ ಬಂದಾಗ ಪಿ.ಆರ್. ರಮೇಶ್ ಪ್ರಶ್ನೆಗೆ ಅಲ್ಲಿಯೇ ಪರಿಹಾರ ಸೂಚಿಸಿದರು. ಬಿಬಿಎಂಪಿಯಲ್ಲಿ ಬಾಕಿ ಕಾಮಗಾರಿ ಮತ್ತು ಯೋಜನೆಯ ಕಾಮಗಾರಿ ಕೈಗೊಳ್ಳುವ ಮುನ್ನ ಗುತ್ತಿಗೆದಾರರು ಒಪ್ಪಿಗೆ ಪತ್ರ ಪಡೆಯುವಂತೆ ಆದೇಶ ಹೊರಡಿಸಿದ ಆಯುಕ್ತರ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್‍ಗೆ ಉತ್ತರ ನೀಡಿದ ಸಿಎಂ ಕೂಡಲೇ ಈ ಆದೇಶ ರದ್ದುಪಡಿಸುವಂತೆ ಆಯುಕ್ತರಿಗೆ ಸೂಚಿಸುವುದಾಗಿ ಭರವಸೆ ನೀಡಿ ಈ ಆದೇಶಕ್ಕೆ ತಡೆ ನೀಡಿದ್ದರು.
ಕೈ ಕೊಟ್ಟ ಸಿಎಂ :ಆದರೆ, ಇದೇ ಉತ್ಸಾಹದಲ್ಲಿ ಎಸ್ ಆರ್ ಪಾಟೀಲ್ ಕೂಡ ಮಾತನಾಡಲು ಸಿದ್ಧತೆ ಆರಂಭಿಸಿಕೊಂಡಿದ್ದರು. ಆದರೆ ಪಿ.ಆರ್. ರಮೇಶ್ ಮಾತು ಮುಗಿಯುವ ಮುನ್ನವೇ ಸಿಎಂ ಎದ್ದು ಹೊರ ನಡೆದರು. ಸಿಎಂ ಇಲ್ಲದೇ ಪ್ರಶ್ನೆ ಕೇಳಲು ಸಾಧ್ಯವಿಲ್ಲ ಎಂದ ಎಸ್‍ಆರ್ ಅವರನ್ನು ವಾಪಸ್ ಕರೆಸುವಂತೆ ಸಭಾಪತಿಗಳು ಹಾಗೂ ಆಡಳಿತ ಪಕ್ಷದ ನಾಯಕರಿಗೆ ಮನವಿ ಮಾಡಿದರು.
ಆದರೆ, ತುರ್ತು ಕೆಲಸದ ನಿಮಿತ್ತ ಹೊರ ಹೋಗಿರುವ ಸಿಎಂ ವಾಪಸ್ ಬರಲ್ಲ. ನಿಮಗೆ ನಾನು ಉತ್ತರ ನೀಡುತ್ತೇನೆ. ಸಮಾಧಾನ ಆಗದಿದ್ದರೆ ಮತ್ತೆ ಸಿಎಂ ಮುಂದೆ ಇನ್ನೊಮ್ಮೆ ಚರ್ಚಿಸಿ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷನಾಯಕರು ಸಿಎಂ ಆಗಮನಕ್ಕಾಗಿಯೇ ಎರಡು ದಿನ ಕಾದಿದ್ದೇನೆ.
ಇಂದು ಬಂದು ವಾಪಸ್ ತೆರಳಿದ್ದು ಎಷ್ಟು ಸರಿ. ಅವರು ಇರುವಾಗಲೇ ವಿಚಾರ ಪ್ರಸ್ತಾಪ ಮಾಡುತ್ತೇನೆ. ತುಂಬಾ ಗಂಭೀರ ವಿಚಾರ ಇದಾಗಿದೆ. ನೀವು ಕೊಡುವ ಉತ್ತರದಿಂದ ಸಮಾಧಾನ ಇಲ್ಲ ಎಂದರು.
ಓದಿ:12,038 ಕೋಟಿ ರೂ. ಪೂರಕ ಅಂದಾಜಿಗೆ ಮಂಜೂರಾತಿ ಪಡೆಯಲು ಸದನದಲ್ಲಿ ಪ್ರಸ್ತಾವನೆ ಮಂಡನೆ
ಈ ಸಂದರ್ಭ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ಸಾಕಷ್ಟು ಮಾತುಕತೆ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಸಹ ಸಿಎಂ ಬಂದ ಮೇಲೆ ಚರ್ಚಿಸಿ ಎಂದು ಸಲಹೆ ಇತ್ತರು. ಪ್ರತಿಪಕ್ಷ ಸದಸ್ಯರು ಒತ್ತಡ ಹೇರಿದಾಗ ಡಿಸಿಎಂ ಗೋವಿಂದ ಕಾರಜೋಳ ಎದ್ದು ನಿಂತು ಸದ್ಯ ಚರ್ಚೆ ನಡೆಯಲಿ, ಸಭಾ ನಾಯಕರು ಉತ್ತರ ಕೊಡುತ್ತಾರೆ.
ಅದು ಸಮಾಧಾನ ತರದಿದ್ದರೆ ಸಿಎಂ ಬಂದಾಗ ಪ್ರಸ್ತಾಪಿಸಿ ಎಂದು ಸಲಹೆ ಇತ್ತರು. ಆಗ ಪ್ರತಿಪಕ್ಷ ಸಚೇತಕ ನಾರಾಯಣಸ್ವಾಮಿ ಸಚಿವರ ಉತ್ತರ ಸಮರ್ಪಕವಾಗಿರಲ್ಲ. ಉತ್ತರಿಸಲು ತಡಬಡಾಯಿಸುತ್ತಾರೆ ಎಂದು ಹೇಳಿದರು. ಇದರಿಂದ ಡಿಸಿಎಂ ಕಾರಜೋಳ ಹಾಗೂ ಸಚಿವ ಸಿಸಿ ಪಾಟೀಲ್ ಕುಪಿತರಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಸರ್ಕಾರ ಇದ್ದಾಗ ಯಾವ್ಯಾವ ಸಚಿವರು ಎಷ್ಟು ಸಮರ್ಥವಾಗಿ ಉತ್ತರ ನೀಡಿದ್ದಾರೆ ಎನ್ನುವುದು ಗೊತ್ತು ಎಂದರು.
ಪ್ರಶ್ನೆ ಕೇಳಲಿಲ್ಲ :ಸಿಎಂ ಅನುಪಸ್ಥಿತಿಯಲ್ಲಿ ಮಹತ್ವದ ಚರ್ಚೆ ನಡೆಯದೇ, ಅವರ ಅನುಪಸ್ಥಿತಿಯೇ ದೊಡ್ಡ ಚರ್ಚೆಯಾಗಿ ಸದನದ ಒಂದು ಗಂಟೆ ಕಾಲಾವಧಿಯನ್ನು ನುಂಗಿ ಹಾಕಿತು.
ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೊರೆ ಹೋಗಿರುವ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ನಿರ್ಧರಿಸಿದ್ದರಿಂದ ಗಮನ ಸೆಳೆಯುವ ಸೂಚನೆಯಡಿ ಆರೋಗ್ಯ ಸಚಿವ ಸುಧಾಕರ್‌ಗೆ ಕೇಳಬೇಕಿದ್ದ ಗ್ರಾಮೀಣ ಭಾಗದಲ್ಲಿ ಪ್ರಥಮ ಚಿಕಿತ್ಸಕರಾಗಿ ಸೇವೆ ಸಲ್ಲಿಸುತ್ತಿರುವವರ ಸೇವೆಯನ್ನು 2007ರ ಕರ್ನಾಟಕ ಮೆಡಿಕಲ್ ಎಸ್ಟಾಬ್ಲಿಷ್‍ಮೆಂಟ್ ಆಕ್ಟ್ ಪ್ರಕಾರ ತಡೆಹಿಡಿದಿದ್ದು, ಜನರ ಆರೋಗ್ಯದ ದೃಷ್ಟಿ ಯಿಂದ ಪ್ರಥಮ ಚಿಕಿತ್ಸಕರಿಗೆ ತರಬೇತಿಯನ್ನು ನೀಡಿ ಸೇವೆ ಮುಂದುವರೆಸುವ ಕುರಿತು ಮಾಹಿತಿ ಕೇಳಬೇಕಿದ್ದ ಪ್ರಶ್ನೆಯನ್ನು ಕೇಳುವುದಿಲ್ಲ ಎಂದು ಎಸ್ಆರ್ಪಿ ತಿಳಿಸಿದರು.
ಈ ಹಿನ್ನೆಲೆ ಇಂದು ಅವರು ಕೇಳಬೇಕಿದ್ದ ಎರಡು ಪ್ರಶ್ನೆಗಳಿಗೆ ಉತ್ತರದ ಬದಲು ಬೇರೆ ತಿರುವು ಪಡೆದ ಚರ್ಚೆಯೇ ಸದನದಲ್ಲಿ ಗಮನ ಸೆಳೆಯಿತು.