ಬೆಂಗಳೂರು:ಇಂದು ನೂತನ ಸಚಿವರ ಮಠದ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಸ್ವಾಮೀಜಿವರು ಕೂಡಾ ರಾಜ್ಯ ಸಂಚಾರ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಅವರ ಬಳಿ ಮಾಹಿತಿ ಸಂಗ್ರಹಿಸಿದರು.
ಸರ್ಕಾರದ ವತಿಯಿಂದ ಕೈಗೊಂಡಿರುವ ಪರಿಹಾರ ಕಾರ್ಯದ ಬಗ್ಗೆಯೂ ಸಿಎಂ ವಿವರಣೆ ನೀಡಿದ್ದು, ಕೇಂದ್ರ ಸರ್ಕಾರ ನೀಡುತ್ತಿರುವ ಪರಿಹಾರ ಹಾಗೂ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಐದು ಲಕ್ಷ ಕೊಡುವ ಬಗ್ಗೆ ಗಮನಕ್ಕೆ ತಂದರು. ಇದೇ ವೇಳೆ ಸಚಿವರಾದ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಆರ್.ಅಶೋಕ್, ಅಶ್ವತ್ಥ್ ನಾರಾಯಣ ಸಾಥ್ ನೀಡಿದರು.
ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಸಿಎಂ ಬಳಿಕ ಮಾತನಾಡಿದ ಬಿಎಸ್ವೈ, ನಮ್ಮ ಬೆಳವಣಿಗೆಗೆ ಆದಿಚುಂಚನಗಿರಿ ಮಠ ಬಹಳ ಸಹಕಾರ ಕೊಟ್ಟಿದೆ. ಹಿಂದಿನ ಶ್ರೀಗಳು ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಈಗಿನ ಶ್ರೀಗಳೂ ಕೊಡ್ತಿದ್ದಾರೆ. ಅವರ ಆಶೀರ್ವಾದ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು. ಇನ್ನು ಸಚಿವ ಸ್ಥಾನ ವಂಚಿತರ ಅಸಮಾಧಾನದ ಕುರಿತು ಪ್ರಶ್ನಿಸಿದಾಗ, ಅಸಮಾಧಾನಗಳು ಎಲ್ಲಾ ಇದ್ದಿದ್ದೇ. ಎಲ್ಲವೂ ಸರಿಹೋಗುತ್ತೆ ಎಂದರು.
ಸಚಿವ ಆರ್.ಅಶೋಕ್ ಮಾತನಾಡಿ, ಶ್ರೀಗಳನ್ನು ಭೇಟಿ ಮಾಡಿದ್ದೇನೆ. ಸರ್ಕಾರಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಕೇಳಿದ್ದೇನೆ. ಸಂತೋಷದಿಂದ ಆಶೀರ್ವಾದ ಮಾಡಿದ್ದಾರೆ. ಸರ್ಕಾರದ ಆಗು ಹೋಗುಗಳ ವಿಚಾರ, ಮಂತ್ರಿ ಮಂಡಲದ ವಿಚಾರದ ಚರ್ಚೆ ಮಾಡುತ್ತೇನೆ. ಅವರ ಸಲಹೆ, ಸಹಕಾರದ ಮೇಲೆ ಕೆಲಸ ಮಾಡುತ್ತೇವೆ. ಖಾತೆ ಹಂಚಿಕೆ ನಾಳೆಯೊಳಗೆ ಆಗಬಹುದು. ಖಾತೆ ಹಂಚಿಕೆ ಸಿಎಂ ಅಧಿಕಾರ. ಅವರು ಯಾವ ಖಾತೆ ಯಾರಿಗೆ ಹಂಚುತ್ತಾರೋ ಅದನ್ನು ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು.