ಬೆಂಗಳೂರು:ಲಾಕ್‌ಡೌನ್ ಸಡಿಲಿಕೆ ಸಂಬಂಧ ಸಿಎಂ ಯಡಿಯೂರಪ್ಪ ರೆಡ್ ಜೋನ್ಗಳ ಜಿಲ್ಲಾಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಸಂವಾದ ನಡೆಸುತ್ತಿದ್ದಾರೆ.
ರೆಡ್ ಜೋನ್ ಡಿಸಿಗಳ ಜೊತೆ ಸಿಎಂ ವಿಡಿಯೋ ಸಂವಾದ ಕೇಂದ್ರ ಸರ್ಕಾರ ಈಗಾಗಲೇ ವಲಯವಾರು ಸಡಿಲಿಕೆ ಸಂಬಂಧ ಮಾರ್ಗಸೂಚಿಯನ್ನು ಹೊರಡಿಸಿದೆ. ಗ್ರೀನ್ ಜೋನ್, ಆರೆಂಜ್ ಜೋನ್ ಮತ್ತು ರೆಡ್ ಜೋನ್ಗಳಲ್ಲಿ ಸಡಿಲಿಕೆ, ಕೆಲ ನಿಯಂತ್ರಣಗಳನ್ನು ಸೂಚಿಸಿ ಮಾರ್ಗಸೂಚಿ ಹೊರಡಿಸಿದೆ. ಆ ಸಂಬಂಧ ಸಿಎಂ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ.
ಕೇಂದ್ರದ ಮಾರ್ಗಸೂಚಿಯನ್ವಯ ಗ್ರೀನ್ ಹಾಗೂ ಆರೆಂಜ್ ಜೋನ್ಗಳಲ್ಲಿ ಯಾವ ರೀತಿ ಸಡಿಲಿಕೆ ಮಾಡಬೇಕು. ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಮೈಸೂರು, ಬೆಂಗಳೂರು ನಗರ, ಬೆಂ.ಗ್ರಾಮಾಂತರವನ್ನು ರೆಡ್ ಜೋನ್ ಆಗಿ ಘೋಷಿಸಿದೆ. ಆದರೆ ಕರ್ನಾಟಕದಲ್ಲಿ ಇನ್ನೂ ಕೆಲ ಜಿಲ್ಲೆಗಳು ರೆಡ್ ಜೋನ್ಗಳಾಗಿವೆ. ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು ನಗರ, ಮೈಸೂರು, ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಸದ್ಯ ರೆಡ್ ಜೋನ್ ಜಿಲ್ಲೆಗಳಾಗಿವೆ. ಅದಕ್ಕೆ ಇನ್ನಷ್ಟು ಜಿಲ್ಲೆಗಳನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆ. ಅಲ್ಲಿ ಯಾವ ರೀತಿ ಕೇಂದ್ರದ ಮಾರ್ಗಸೂಚಿಯನ್ನು ಜಾರಿಗೊಳಿಸಿ, ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ರೆಡ್ ಜೋನ್ಗಳಲ್ಲಿ ಮಾಡಬೇಕಾದ ಸಡಿಲಿಕೆ, ನಿಯಂತ್ರಣಗಳ ಸಂಬಂಧ ಸಮಗ್ರವಾಗಿ ಸಮಾಲೋಚನೆ ನಡೆದಿದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ ಯಾವ ರೀತಿ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಅನುಸರಿಬೇಕು ಎಂಬ ಬಗ್ಗೆನೂ ಸೂಚನೆಗಳನ್ನು ನೀಡಲಿದ್ದಾರೆ.
ಶಾಸಕರು, ಸಂಸದರು, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ವಿಡಿಯೋ ಸಂವಾದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ನಾಳೆಯಿಂದ ರಾಜ್ಯದಲ್ಲಿ ಯಾವ ರೀತಿ ಸಡಿಲಿಕೆಗಳನ್ನು ಮಾಡಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.