ಬೆಂಗಳೂರು: ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಗಳ (ಎಸ್.ಒ.ಪಿ) ಪರಿಣಾಮಕಾರಿ ಜಾರಿ ಮತ್ತು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳನ್ನು ವ್ಯಾಪಕಗೊಳಿಸುವ ಮೂಲ️ಕ ಕೋವಿಡ್-19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ️.ಎಸ್.ಯಡಿಯೂರಪ್ಪ ಹೇಳಿದರು.
ಸಿಎಂ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಲ️ಯವಾರು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಿಎಂ ಸಭೆ ನಡೆಸಿದರು.
ನಗರದಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸಲು ಮಧ್ಯವರ್ತಿಗಳು ಹಣ ಪಡೆಯುತ್ತಿರುವ ಬಗ್ಗೆ ಹಾಗೂ ಮನೆ ಆರೈಕೆಯಲ್ಲಿದ್ದು ಶುಶ್ರೂಷೆ ಪಡೆಯುತ್ತಿರುವುವರ ಹೆಸರಲ್ಲಿ ಆಸ್ಪತ್ರೆಯಲ್ಲಿರುವುದಾಗಿ ಸುಳ್ಳು ಬಿ️ಲ್ಲುಗಳನ್ನು ಸಲ್ಲಿಸುತ್ತಿರುವ ಬಗ್ಗೆಯೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ನಿಗಾ ವಹಿಸಿ ತಕ್ಷಣವೇ ಕ್ರಮ ಜರುಗಿಸುವಂತೆ ಸಿಎಂ ಸೂಚಿಸಿದರು.
ಹೋಮ್ ಐಸೊಲೇಷನ್‍ನಲ್ಲಿ ಇರುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದರ ಮೂಲ️ಕ ಟೆಲಿಮಾನಿಟರಿಂಗ್ ಮೂಲ️ಕ ನಿರಂತರ ನಿಗಾ ವಹಿಸುವುದು ಅತಿ ಮುಖ್ಯ. ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ಕಡಿಮೆ ಮಾಡಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಮಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲು ಪೊಲೀಸರೊಂದಿಗೆ ವಲ️ಯ ಉಸ್ತುವಾರಿ ಅಧಿಕಾರಿಗಳು ಸಮನ್ವಯ ಸಾಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಹಬ್ಬಗಳು ಪ್ರಾರಂಭವಾಗುತ್ತಿರುವುದರಿಂದ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಕೋವಿಡ್-19 ಕುರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕಾಗಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸೂಚಿಸಿದರು. ಆಸ್ಪತ್ರೆಯಿಂದ ಮನೆಗೆ ಮರಳುವವರಲ್ಲಿ ಪುನಃ ಸೋಂಕು ಕಾಣಿಸಿಕೊಂಡಿರುವ ಪ್ರಕರಣಗಳೂ ಇರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ತಿಳಿಸಿದರು.
ವಲ️ಯವಾರು ಆರ್ಟಿಪಿಸಿಆರ್ ಪರೀಕ್ಷಾ ವರದಿ, ಮಾಸ್ಕ್ ಧರಿಸುವಿಕೆ ವರದಿಯನ್ನು ಪರಿಶೀಲಿಸಿದರಲ್ಲದೆ, ಹೋಮ್ ಐಸೊಲೇಷನ್ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಹಾಗೂ ಸಂಪರ್ಕ ಪತ್ತೆಗೆ ಒತ್ತು ನೀಡಲು ಸೂಚನೆ ನೀಡಿದರು. ಸೋಂಕಿತರ ವಿಳಾಸಗಳು ತಪ್ಪಾಗಿರುವುದು ಮತ್ತು ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿರುವುದರಿಂದ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿದೆ. ನಗರದಲ್ಲಿ ಈವರೆಗೆ 20 ಲ️ಕ್ಷದ ಮೇಲೆ ತಪಾಸಣೆಗಳಾಗಿವೆ. ಪ್ರತಿ ದಿನ ಸರಿಸುಮಾರು 47 ಸಾವಿರ ತಪಾಸಣೆಗಳಾಗುತ್ತಿದೆ. ವಲ️ಯವಾರು - ಸಾವಿನ ಪ್ರಮಾಣ ನಾಲ್ಕೂ ವಲ️ಯಗಳಲ್ಲಿ ಕಡಿಮೆಯಾಗುತ್ತಿದ್ದು, ನಿಗದಿತ ಗುರಿಗಿಂತ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ ಎಂದು ಬಿ️ಬಿ️ಎಂಪಿ ಆಯುಕ್ತರು ಸಭೆಗೆ ತಿಳಿಸಿದರು.
ಆರ್.ಆರ್. ನಗರದಲ್ಲಿ ಪ್ರತಿ ಸೋಂಕಿತ ವ್ಯಕ್ತಿಗೆ ಕನಿಷ್ಠ 10 ಸಂಪರ್ಕ ಪತ್ತೆಯನ್ನು ಮಾಡಲಾಗುತ್ತಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಲಾಗಿದೆ. ಉಪ ಚುನಾವಣೆ ಇರುವುದರಿಂದ ಸಾಮಾಜಿಕ ಅಂತರವನ್ನು ಕಾಪಾಡಲು ಪ್ರತ್ಯೇಕ ಎಸ್.ಒ.ಪಿಯನ್ನು ರೂಪಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅಭಿಪ್ರಾಯಪಟ್ಟರು. 525 ಐಸಿಯು ಬೆಡ್‍ಗಳು ನಗರದ ಆಸ್ಪತ್ರೆಗಳಲ್ಲಿ ಲ️ಭ್ಯವಿದೆ. ವೆಂಟಿಲೇಟರ್ಗಳು ಹಾಗೂ ಐಸಿಯು ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ ಎಂದರು.
ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದ್ದು, ಬೆಡ್ ಆಕ್ಯುಪೆನ್ಸಿ ವಿವರಗಳನ್ನು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ವಿವರಿಸಿದರು. ರಾಜ್ಯದ ಒಟ್ಟು ಕೋವಿಡ್-19 ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿವೆ. ನಿರಂತರವಾಗಿ ಈ ನಿಟ್ಟಿನಲ್ಲಿ ಗಮನ ಹರಿಸುತ್ತಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಬಿ️ಬಿ️ಎಂಪಿ ಆಯುಕ್ತರು ಹೇಳಿದರು.
ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಎಸ್.ಟಿ.ಸೋಮಶೇಖರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, ಬಿ️ಬಿ️ಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.