ಆನೇಕಲ್:ಬಿಜೆಪಿ ಹಿರಿಯ ಶಾಸಕ, ಮಾಜಿ ಸಚಿವ ಸಿ.ಎಂ. ಉದಾಸಿ ನಿನ್ನೆ ನಿಧನ ಹೊಂದಿದ್ದು ಇಂದು ಜಿಲ್ಲೆಯ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರಿನ ಬೊಮ್ಮಸಂದ್ರದ ಮಜುಂದಾರ್ ಷಾ ಆಸ್ಪತ್ರೆಯಿಂದ ಉದಾಸಿ ಪಾರ್ಥಿವ ಶರೀರವನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಪುತ್ರ ಶಿವಕುಮಾರ್ ಉದಾಸಿ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಇಂದು ಸಂಜೆ 4 ಗಂಟೆಗೆ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಹಾನಗಲ್ ಪಟ್ಟಣಕ್ಕೆ ಮೃತದೇಹ ಬರಲಿದ್ದು, ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಗೌಳಿ ಗಲ್ಲಿಯಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಯ ನಂತರ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಂಜೆ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಆಪ್ತ ಬಿ.ಎಸ್ ಅಕ್ಕಿವಳ್ಳಿ ತಿಳಿಸಿದರು.