ನವದೆಹಲಿ/ಬೆಂಗಳೂರು:ರಾಜ್ಯಸಭಾ ಸದಸ್ಯರಾಗಿ ಇತ್ತೀಚಿಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ವಿಷಯ ತುಂಬಾ ನೋವಿನ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದರು.
ಅಶೋಕ್ ಗಸ್ತಿ ಅವರಿಗೆ ಶ್ರದ್ಧಾಂಜಲಿ: ಮುಖ್ಯಮಂತ್ರಿಗಳಿಂದ ಪುಷ್ಪನಮನ
ರಾಜ್ಯಸಭಾ ಸದಸ್ಯರಾಗಿ ಇತ್ತೀಚಿಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿಯವರು ಅಧಿವೇಶನದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ವಿಷಯ ತುಂಬಾ ನೋವಿನ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಅಶೋಕ್ ಗಸ್ತಿ ಅವರ ಗೌರವಾರ್ಥವಾಗಿ ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪನಮನ ಸಲ್ಲಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಗಸ್ತಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡಿದ್ದರು, ಪಕ್ಷಕ್ಕೆ ಅವರ ಕೊಡುಗೆಯನ್ನು ಗಮನಿಸಿದ್ದ ರಾಷ್ಟ್ರೀಯ ನಾಯಕರು ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಮೂಲಕ ಅವರಿಗೆ ಮನ್ನಣೆ ನೀಡಿತ್ತು. ಪ್ರಸ್ತುತ ನಡೆಯುತ್ತಿರುವ ಅಧಿವೇಶನ ಅವರ ಮೊದಲ ಅಧಿವೇಶನವಾಗಿತ್ತು, ಅದರಲ್ಲಿ ಅವರು ಪಾಲ್ಗೊಳ್ಳದಂತಾಗಿರುವುದು ತೀವ್ರ ನೋವು ತಂದಿದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಅಧಿವೇಶನದ ನಿಮಿತ್ತ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲವೆಂದು ಕಳುಹಿಸಿದ್ದ ಸಂದೇಶವನ್ನು ಸಂಸತ್ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರು ವಾಚಿಸಿದರು. ಸಂತಾಪ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ ಕಾರಜೋಳ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಪಿ.ಸಿ. ಗದ್ದಿಗೌಡರು, ಪ್ರತಾಪ್‌ಸಿಂಹ, ರಾಜ್ಯ ಸರ್ಕಾರದ ದೆಹಲಿಯಲ್ಲಿನ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಮ್.ವಿಜಯ ಭಾಸ್ಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.