ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಚಿಸಲಾಗಿರುವ ಅಪರಾಧ ಕೃತ್ಯ ನಡೆದ ನಡೆದ ಸ್ಥಳದ ಪರಿಶೀಲನಾ ಅಧಿಕಾರಿ ಹುದ್ದೆ 'Scene Of Crime Officer' ಹುದ್ದೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಕಾತಿ ಆದೇಶ ಪತ್ರಗಳ ಹಸ್ತಾಂತರ ಮಾಡಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.
ಪೊಲೀಸ್ ಇಲಾಖೆ ಪುನಶ್ಚೇತನಕ್ಕಾಗಿ 50 ಬಸ್ಗಳಿಗೆ ಚಾಲನೆ, ಪೊಲೀಸ್ ಆರೋಗ್ಯ ಭಾಗ್ಯ ಪುನಶ್ಚೇತನ ಯೋಜನೆ, ಮಕ್ಕಳ ಶಿಕ್ಷಣಕ್ಕೆ ಪೊಲೀಸ್ ವಿದ್ಯಾನಿಧಿ ಯೋಜನೆಗೆ ಚಾಲನೆ, ಸೀನ್ ಆಫ್ ಕ್ರೈಂ ಆಫೀಸರ್ಸ್ ಹುದ್ದೆಗೆ ಆದೇಶ ಪತ್ರ ನೀಡಿಕೆ ಯೋಜನೆಗೆ ವಿಧಾನಸೌಧದ ಮುಂಭಾಗ ಸಿಎಂ ಚಾಲನೆ ನೀಡಿದರು.
ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಂದು ಪೊಲೀಸ್ ಇಲಾಖೆಯಲ್ಲಿ ಮಹತ್ವದ ತಿರುವ ನೀಡುವ ದಿನವಾಗಿದೆ. ಅಪರಾಧದ ನಿಯಂತ್ರಣ, ಅಪರಾಧ ತಡೆ, ಶೀಘ್ರದಲ್ಲಿ ಅಪರಾಧ ಶೋಧನೆ ನಮ್ಮ ಪೊಲೀಸರ ಗುರಿ. ಕಳೆದ ಎರಡು ವರ್ಷದಲ್ಲಿ ಅಪರಾಧ ನಿಯಂತ್ರಣದಲ್ಲಿ ಬಹಳ ಯಶಸ್ಸು ಕಂಡಿದ್ದೇವೆ, ಕಠಿಣ ಕ್ರಮ ಕೈಗೊಂಡಿದ್ದೇವೆ. ಅಪರಾಧ ಹಿನ್ನೆಲೆಯಿರುವ ವ್ಯಕ್ತಿಗಳ ಮೇಲೆ ದೃಷ್ಟಿ ಇರಿಸಿದ್ದೇವೆ. ಆದರೆ ಅಪರಾಧ ಶೋಧ ಬಹಳ ಬೇಗ ಆಗಬೇಕು ಎಂದರು.
ಬೇರೆ ಬೇರೆ ದೇಶದಲ್ಲಿ ವಿಜ್ಞಾನ ಜ್ಞಾನ ಇರುವ ಪೊಲೀಸ್ ಅಧಿಕಾರಿ ಅಪರಾಧ ನಡೆದ ಸ್ಥಳಕ್ಕೆ ಹೋಗುತ್ತಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಜ್ಞಾನವಿರುವ ವ್ಯಕ್ತಿ ಹೋಗುತ್ತಾರೆ. ಇದೀಗ ದೇಶದಲ್ಲೇ ಮೊದಲ ಬಾರಿಗೆ ನಾವು ಮೊದಲ ಬಾರಿ ಸೀನ್ ಆಫ್ ಕ್ರೈಂ ಆಫೀಸರ್ಸ್ ಹುದ್ದೆಗೆ ನೇಮಕ ಮಾಡಿದ್ದೇವೆ. 206 ಹುದ್ದೆ ಮಂಜೂರು ಮಾಡಿಕೊಟ್ಟಿದ್ದಾರೆ. ಅಪರಾಧ ಶೋಧನೆಗೆ ಹೊಸ ಹೆಜ್ಜೆ ಇರಿಸಿದ್ದೇವೆ ಎಂದು ತಿಳಿಸಿದರು.
ಅಪರಾಧ ನಡೆದ ಕೆಲ ನಿಮಿಷದಲ್ಲೇ ಸಾಕ್ಷಿ ಕಾಪಾಡಬೇಕು, ಸಾಕ್ಷಿ ನಾಶ ಆದರೆ ಪತ್ತೆ ಕಷ್ಟ. ಹಾಗಾಗಿ ವಿಧಿವಿಜ್ಞಾನ ಜ್ಞಾನ ಇರುವವರ ಅಗತ್ಯವಿದೆ. ಅದಕ್ಕಾಗಿ ಅಗತ್ಯ ತರಬೇತಿ ನೀಡಿ ಕಳಿಸಲಾಗುತ್ತದೆ. ಮೊದಲು ದೊಡ್ಡ ದೊಡ್ಡ ಹೇಯ ಕೃತ್ಯಕ್ಕೆ ಆದ್ಯತೆ ನಂತರ, ಎಲ್ಲ ಕೃತ್ಯಕ್ಕೆ ಬಳಸಲಿದ್ದೇವೆ. ಇದರಿಂದ ಅಪರಾಧ ಪತ್ತೆ ಶೀಘ್ರವಾಗಲಿದೆ, ಶೀಘ್ರ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯಾನಿಧಿಗೆ ಬಜೆಟ್ನಲ್ಲಿ ಅನುದಾನ ಕೊಟ್ಟಿದ್ದಾರೆ, 1 ಸಾವಿರದಿಂದ 40 ಸಾವಿರ ರೂ.ಗಳವರೆಗೆ ಪೊಲೀಸರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈಗಾಗಲೇ ಇರುವ ಆರೋಗ್ಯ ಭಾಗ್ಯ ಯೋಜನೆಗೆ ಪುನಶ್ಚೇತನಗೊಳಿಸಿ ಹಿಂದಿನ ನಾಲ್ಕು ವರ್ಷದ ಎಲ್ಲಾ ಬಾಕಿ ಹಣ ಬಿಡುಗಡೆ ಮಾಡಿ ಹೊಸ ಚೈತನ್ಯ ನೀಡಿದ್ದಾರೆ. ಆರೋಗ್ಯ ಭಾಗ್ಯದ ಬಜೆಟ್ ಅನ್ನು ಎರಡು ಪಟ್ಟು ಹೆಚ್ಚಿಸಿದ್ದಾರೆ. ಪೊಲೀಸ್ ಇಲಾಖೆ ಸುಧಾರಣೆ ಜೊತೆಗೆ, ಪೊಲೀಸರ ಮಕ್ಕಳ ಆರೋಗ್ಯ, ವಿದ್ಯೆಗೆ ಪ್ರಾಮುಖ್ಯತೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.