ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿನ ಪ್ರವಾಹ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲು ಹೆಚ್ಎಎಲ್ನಿಂದ ವಿಶೇಷ ವಿಮಾನದ ಮೂಲಕ ಬಳ್ಳಾರಿಗೆ ಪ್ರಯಾಣ ಬೆಳೆಸಿದ್ದಾರೆ.
ಮಳೆಹಾನಿ ಸಮೀಕ್ಷೆ ಬಳಿಕ ಸಂಪುಟ ರಚನೆ ಸಂಬಂಧ ಸಿಎಂ ದೆಹಲಿಗೆ - ಸಂಪುಟ ರಚನೆ ವಿಚಾರವಾಗಿ ದೆಹಲಿಗೆ
ಮಹರಾಷ್ಟ್ರದಲ್ಲಿ ಸುರಿದ ಭಿಕರ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲ ಭಾಗ ಜಲಾವೃತಗೊಂಡಿದ್ದು, ಇಂದು ಸಿಎಂ ಯಡಿಯೂರಪ್ಪ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ನಂತರ ಸಂಪುಟ ರಚನೆಯ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ.
![ಮಳೆಹಾನಿ ಸಮೀಕ್ಷೆ ಬಳಿಕ ಸಂಪುಟ ರಚನೆ ಸಂಬಂಧ ಸಿಎಂ ದೆಹಲಿಗೆ](https://etvbharatimages.akamaized.net/etvbharat/prod-images/768-512-4043639-thumbnail-3x2-vickyjpg.jpg)
ಮಳೆಯಿಂದ ಹಾನಿಗೊಳಗಾದ ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಧವಳಗಿರಿ ನಿವಾಸದ ಬಳಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವ ಕಾರಣ ಆತಂಕದ ಪರಿಸ್ಥಿತಿ ಇದೆ. ಪರಿಸ್ಥಿತಿ ಎದುರಿಸಲು ಸರ್ಕಾರ ಸಜ್ಜಾಗಿದೆ. ಪ್ರತ್ಯಕ್ಷವಾಗಿ ಪರಿಸ್ಥಿತಿ ಅವಲೋಕಿಸಲು ವೈಮಾನಿಕ ಸಮೀಕ್ಷೆ ನಡೆಸಲು ಅಧಿಕಾರಿಗಳ ಜೊತೆ ತೆರಳುತ್ತಿದ್ದೇನೆ. ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಬೇಕಾದ ಎಲ್ಲಾ ನೆರವು ನೀಡುತ್ತೇವೆ. ಅಗತ್ಯ ಬಿದ್ದರೆ ದೋಣಿಗಳ ವ್ಯವಸ್ಥೆ, ಸ್ಥಳಾಂತರ, ಊಟ, ವಸತಿ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಸಂಜೆಯವರೆಗೂ ಮಳೆ ಹಾನಿ ಪೀಡಿತ ಜಿಲ್ಲೆಗಳಲ್ಲಿ ಅಧಿಕಾರಿಗಳೊಂದಿಗೆ ಇದ್ದು, ಸಮೀಕ್ಷೆ ನಡೆಸುತ್ತೇನೆ ಎಂದರು.
ನಂತರ ಸಚಿವ ಸಂಪುಟ ರಚನೆ ವಿಚಾರವಾಗಿ ಮಾತನಾಡಿದ ಅವರು, 24 ಗಂಟೆಯಲ್ಲಿ ಸಂಪುಟ ರಚನೆ ಮಾಡಲು ನಾನು ಸಿದ್ಧನಿದ್ದೇನೆ. ಪ್ರತಿಪಕ್ಷದವರನ್ನು ಕೇಳಿ ಸಂಪುಟ ರಚನೆ ಮಾಡುವ ಅವಶ್ಯಕತೆ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಕೇಂದ್ರದ ನಾಯಕರು ತೀರ್ಮಾನ ಕೇಳಬೇಕು. ಮೋದಿಯವರನ್ನು ಭೇಟಿಯಾಗಬೇಕು. ನನಗೂ ಸಂಪುಟವಿದ್ದರೆ ಕೆಲಸ ಮಾಡಲು ಸುಲಭವಾಗುತ್ತದೆ. ಇದಕ್ಕಾಗಿ ಇಂದು ಉತ್ತರ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ತೆರಳುತ್ತಿದ್ದೇನೆ ಎಂದರು.