ಬೆಂಗಳೂರು:ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯನ್ನು ನಾಳೆಗೆ ಮುಂದೂಡುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಪ್ರೀಂಕೋರ್ಟ್ ಇಂದಿನ ವಿಚಾರಣೆ ವೇಳೆ ವಿಶ್ವಾಸಮತಯಾಚನೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಆದೇಶ ನೀಡದೇ ಇರುವುದರಿಂದ ನಾಳೆಯ ತನಕ ಮುಂದೂಡಲು ಇರುವ ಸಕಾರಣಗಳ ಶೋಧನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ಮಾತನಾಡುತ್ತಾ ಸೋಮವಾರವೇ ವಿಶ್ವಾಸಮತ ಸಾಬೀತುಪಡಿಸಲು ಕಳೆದ ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಆದರೆ ನಿನ್ನೆ ಸಿಎಂ ವಿಶ್ವಾಸಮತ ಸಾಬೀತುಪಡಿಸಲು ಮುಂದಾಗಲಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ವಿಶ್ವಾಸ ಮತ ಯಾಚನೆಗೆ ಬುಧವಾರದ ತನಕ ಸಮಯ ನೀಡುವಂತೆ ಸಿಎಂ ಮನವಿ ಮಾಡಿದ್ದರು. ಆದರೆ ಇದಕ್ಕೆ ವಿಧಾನಸಭಾಧ್ಯಕ್ಷರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮತ್ತಷ್ಟು ಸಮಾಯಾವಕಾಶ ನೀಡಲು ಸಾದ್ಯವಿಲ್ಲ ಅದಕ್ಕೆ ಪ್ರತಿಪಕ್ಷದ ಒಪ್ಪಿಗೆಯೂ ಬೇಕಾಗುತ್ತದೆ ಎಂದು ತಿಳಿಸಿದ್ದರು. ಸೋಮವಾರದ ಕಲಾಪದಲ್ಲಿ ವಿಶ್ವಾಸಮತ ಯಾಚನೆಗೆ ಸಿದ್ದತೆ ನಡೆದಿದ್ದರೂ ಸಹ ವಿಶ್ವಾಸ ಮತ ಯಾಚನೆ ಕುರಿತ ಚರ್ಚೆಯೇ ರಾತ್ರಿ 11.30 ಆದರೂ ಪೂರ್ಣ ಗೊಳ್ಳಲಿಲ್ಲದ್ದರಿಂದ ಸದನದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.