ಬೆಂಗಳೂರು: ಫ್ರೀಡೌನ್ ಶುರುವಾಗುತ್ತಿದ್ದಂತೆ ರಾಜ್ಯ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಫ್ರೀಡೌನ್ಗೆ ನಿರ್ಬಂಧ ಹೇರುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಲಾಕ್ಡೌನ್ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆ ಪುನಾರಂಭಕ್ಕೆ ಅವಕಾಶ ಕಲ್ಪಿಸಿದ ನಂತರ ಕೊರೊನಾ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದೆ. ಆರಂಭದಲ್ಲಿ ಬೇರೆ ರಾಜ್ಯದಿಂದ ಬಂದವರಲ್ಲೇ ಹೆಚ್ಚಾಗಿ ಕಾಣಿಸಿಕೊಂಡರೂ ನಂತರ ಕಂಟೈನ್ಮೆಂಟ್ ಝೋನ್, ಐಎಲ್ಐ ಜೊತೆ ಕೊರೊನಾ ಪಾಸಿಟಿವ್ ವ್ಯಕ್ತಿಗಳ ಸಂಪರ್ಕ ಇಲ್ಲದವರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಸೀಲ್‌ಡೌನ್ ವ್ಯಾಪ್ತಿಯನ್ನು ಹಿಂದಿನಂತೆ ವಿಸ್ತರಿಸಿ ಇಡೀ ರಸ್ತೆ ಸೀಲ್‌ಡೌನ್ ಮಾಡಲಾಗುತ್ತಿದೆ. ಕೊರೊನಾ ಕೇಸ್ ಇರುವ ಕಡೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದ್ದು, ಹೋಂ ಕ್ವಾರಂಟೈನ್ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಲಾಗಿದೆ. ಇಷ್ಟೆಲ್ಲಾ ಆದರೂ ಕೊರೊನಾ ಮಾತ್ರ ಸಿಲಿಕಾನ್ ಸಿಟಿಯಲ್ಲಿ ಪ್ರತಿ ದಿನ ಸಂಚೂರಿ ಬಾರಿಸುತ್ತಲೇ ಇದೆ. ಹೀಗಾಗಿ ಫ್ರೀಡೌನ್ ವ್ಯವಸ್ಥೆಗೆ ತಾತ್ಕಾಲಿಕ ನಿರ್ಬಂಧ ಹೇರುವ ಅಥವಾ ಮತ್ತೆ ವಾರದ ಮಟ್ಟಿಗೆ ಲಾಕ್ಡೌನ್ ಜಾರಿಗೆ ತರುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ತಜ್ಞರು ನೀಡಿರುವ ವರದಿ, ಕೊರೊನಾ ಟಾಸ್ಕ್ ಫೋರ್ಸ್ ಶಿಫಾರಸು, ಶಾಸಕರ ಅಭಿಪ್ರಾಯ ಪರಿಶೀಲಿಸಿ ನಾಳೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಲಾಗ್ತಿದೆ.
ಜುಲೈ 1 ರಿಂದ ನಮ್ಮ ಮೆಟ್ರೋ ಸೇವೆಯನ್ನು ಪುನಾರಂಭಿಸಲು ಚಿಂತನೆ ಮಾಡಿದ್ದ ರಾಜ್ಯ ಸರ್ಕಾರ ಈಗ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಇನ್ನೂ ಕೆಲ ದಿನಗಳ ಬಳಿಕ ಮೆಟ್ರೋ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದೆ.