ಬೆಂಗಳೂರು:7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಏಳನೇ ವೇತನ ಆಯೋಗ ರಚನೆಯಾಗಿ 12 ತಿಂಗಳಾಗಿದೆ. ಮಾರ್ಚ್ ವರೆಗೆ ಕಾಲಾವಧಿ ವಿಸ್ತರಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ವೇತನ ಪರಿಷ್ಕರಣೆ ಮಾಡಿ ಘೋಷಣೆ ಮಾಡುವಂತೆ ನಿಯೋಗ ಮನವಿ ಮಾಡಿತು.
ಹೊಸ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದ 11,366 ಜನರಿಗೆ ಹಳೆ ಪಿಂಚಣಿ ಯೋಜನೆಗೆ ಸೇರ್ಪಡೆ ಗೊಳಿಸಲಾಗಿದೆ. ಉಳಿದವರನ್ನೂ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರಿಸಿ, ಪಿಂಚಣಿಗೆ ನೀಡುತ್ತಿರುವ ಕೊಡುಗೆಯನ್ನು ನಿಲ್ಲಿಸುವಂತೆ ಆದೇಶಿಸಲು ಕೋರಿದರು. ತೀವ್ರತರವಾದ 7 ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಗೆ ಚಾಲನೆ ನೀಡಲಾಗಿತ್ತು. ಸರ್ಕಾರಿ ನೌಕರರ ಕುಟುಂಬದವರಿಗೆ ಉಚಿತ ಆರೋಗ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿ ಮಾಡಿದರು.
ಇದನ್ನೂ ಓದಿ:ಪ್ರಧಾನಿ ಮೋದಿ ನಿದ್ರೆ ಮಾಡುತ್ತಿರುವ ವ್ಯಂಗ್ಯಭರಿತ ಫೋಟೋ ಟ್ವೀಟ್ ಮಾಡಿ ಸಿಎಂ ಸರಣಿ ಟೀಕೆ
ಏನಿದು ವೇತನ ಆಯೋಗ: ವೇತನ ಆಯೋಗವು ಭಾರತ ಸರ್ಕಾರದಿಂದ ನೇಮಕಗೊಂಡ ಆಡಳಿತ ವ್ಯವಸ್ಥೆಯಾಗಿದೆ. ವೇತನ ಆಯೋಗವು ವೇತನ ಮತ್ತು ಅದರ ರಚನೆಯಲ್ಲಿ ಅಪೇಕ್ಷಣೀಯ ಮತ್ತು ಸಂಭವನೀಯ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಮಾಡಿದೆ. ಇದು ಸರ್ಕಾರಿ ನೌಕರರಿಗೆ ವೇತನ, ಭತ್ಯೆಗಳು, ಬೋನಸ್ ಮತ್ತು ಇತರ ಪ್ರಯೋಜನಗಳು/ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
7ನೇ ವೇತನ ಆಯೋಗವನ್ನು ಸರ್ಕಾರಿ ನೌಕರರಿಗೆ ಭಾರತ ಸರ್ಕಾರದ ಎಲ್ಲ ನಾಗರಿಕ ಮತ್ತು ಮಿಲಿಟರಿ ವಿಭಾಗಗಳಿಗೆ ತಮ್ಮ ಪಾವತಿ ರಚನೆಯನ್ನು ಹೆಚ್ಚಿಸಲು ಸ್ಥಾಪಿಸಲಾಗಿದೆ. ಏಳನೇ ವೇತನ ಆಯೋಗದ ನಂತರ, ಸರ್ಕಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪಿಂಚಣಿ ಮಿತಿಗಳನ್ನು ಬದಲಾಯಿಸಿದೆ.
ಕರ್ನಾಟಕ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ನೇತೃತ್ವದಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು 2017ರಲ್ಲಿ ರಚನೆ ಮಾಡಿತ್ತು. ರಾಜ್ಯ ಸರಕಾರವು ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ, ಲೆಕ್ಕ ಪರಿಶೋಧನೆ ಮತ್ತು ಖಾತೆಗಳ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ.ವನವಳ್ಳಿ ಅವರನ್ನು ಸದಸ್ಯರನ್ನಾಗಿ ಮತ್ತು ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಸಮಿತಿಯ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿತ್ತು.