ಬೆಂಗಳೂರು: ಮೊದಲ ಜಿಮ್ ಹೊರತುಪಡಿಸಿ ಈವರೆಗೂ ನಡೆದಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆಗಳ ಅನುಷ್ಠಾನದ ಪ್ರಮಾಣ ಕೇವಲ ಶೇ.15 ರಷ್ಟು ಮಾತ್ರ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಿದ್ದು, ಈ ಬಾರಿ ಅದು ಪುನರಾವರ್ತನೆ ಆಗಬಾರದು ಮುಂದಿನ ಮೂರು ತಿಂಗಳ ಒಳಗೆ ಒಡಂಬಡಿಕೆ ಅನುಷ್ಠಾನ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 9.8 ಲಕ್ಷ ಕೋಟಿ ರೂ.ಗಳ ಒಡಂಬಡಿಕೆಯಾಗಿದೆ. ಉದ್ಯಮಿಗಳು ಹೂಡಿಕೆ ಸಮಾವೇಶಕ್ಕೆ ಬಂದು ಸರಿಯಾದ ಸಮಯಕ್ಕೆ ಸರಿಯಾದ ವಲಯದಲ್ಲಿ ಹೂಡಿಕೆ ಮಾಡಿದ್ದಾರೆ. ಎಲ್ಲಾ ಕ್ಲಿಯರೆನ್ಸ್ ಸರ್ಕಾರದಿಂದ ಕೊಡಲಾಗುತ್ತದೆ. ನಮ್ಮ ಸರ್ಕಾರ ಜಿನ್ಯೂನ್ ಹೂಡಿಕೆದಾರರಿಗೆ ಮಾತ್ರ ಅವಕಾಶ ನೀಡಲಿದೆ, ಕಮಿಡೆಟ್ ಹೂಡಿಕೆದಾರರೊಂದಿಗೆ ಮಾತ್ರ ಒಡಂಬಡಿಕೆ ಮಾಡಿಕೊಂಡಿದೆ.
ಹಿಂದಿನ ಹೂಡಿಕೆ ಸಮಾವೇಶಗಳಿಗಿಂತ ನಮ್ಮ ಸರ್ಕಾರ ಒಡಂಬಡಿಕೆಯ ಅನುಷ್ಠಾನದಲ್ಲಿ ಮುಂದಿದೆ. ಮೊದಲ ಜಿಮ್ ಸಮಾವೇಶ 2000 ನೇ ಇಸ್ವಿಯಲ್ಲಿ ನಡೆಯಿತು, ಈ ಸಮಾವೇಶದಲ್ಲಿ 27,057 ಕೋಟಿ ಒಪ್ಪಂದ ಆಗಿತ್ತು ಆದರೆ, 12 ಸಾವಿರ ಕೋಟಿ ಮಾತ್ರ ಹೂಡಿಕೆ ಅನುಷ್ಠಾನ ಬಂದಿದೆ. ಶೇಕಡಾ ಶೇ 44 ರಷ್ಟು ಅನುಷ್ಠಾನ ಆಗಿತ್ತು, 2010 ರಲ್ಲಿ 3,94,768 ಕೋಟಿ ಒಡಂಬಡಿಕೆಯಾಗಿತ್ತು. ಆದರೆ, ಕೇವಲ ಶೇ. 14 ಮಾತ್ರ ಅನುಷ್ಠಾನಕ್ಕೆ ಬಂದಿದೆ, 2012 ರಲ್ಲಿ 6,77,168 ಕೋಟಿ ಒಡಂಬಡಿಕೆಯಾಗಿತ್ತು, ಕೇವಲ ಶೇ 8 ಮಾತ್ರ ಅನುಷ್ಠಾನಕ್ಕೆ ಬಂದಿದೆ, 2016 ರಲ್ಲಿ 3,05,000 ಕೋಟಿ ಒಡಂಬಡಿಕೆಯಾಗಿತ್ತು, ಆದರೆ ಶೇ 15 ಮಾತ್ರ ಅನುಷ್ಠಾನಕ್ಕೆ ಬಂದಿದೆ ಈ ರೀತಿ ಪುನಾರವರ್ತನೆಯಾಗಬಾರದು, ರಾಜ್ಯ ಸರ್ಕಾರ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಲ್ಲ. ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಹಿರಂಗಗೊಳಿಸಿದ್ದೇನೆ.
ಈ ಬಾರಿ 9.08 ಲಕ್ಷ ಕೋಟಿ ಒಡಂಬಡಿಕೆಯಾಗಿದೆ. ಅದರಲ್ಲಿ 2.83 ಲಕ್ಷ ಕೋಟಿ ಹೂಡಿಕೆಯ ಒಡಂಬಡಿಕೆಗೆ ಅನುಮೋದನೆ ಸಿಕ್ಕಿದೆ. ಶೇ.19ಗೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಮುಂದಿನ ಮೂರು ತಿಂಗಳಿನಲ್ಲೇ ಅನುಷ್ಠಾನಕ್ಕೆ ಸೂಚನೆ ನೀಡಲಿದ್ದು, ಅನುಷ್ಠಾನ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದರು.
ಜಿಮ್, ಇನ್ ವೆಸ್ಟ್ ಕರ್ನಾಟಕ ಯಾಕೆ ಮುಖ್ಯ:ಹಿಂದಿನ ಸಮಾವೇಶಗಳಿಗಿಂತ ಈ ಸಮಾವೇಶ ಬಹಳ ಪ್ರಮುಖವಾಗಿದೆ. ಇಡೀ ಜಗತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಆರ್ಥಿಕ ಚೈನ್ ಆಗಿರುವ ಜಗತ್ತಿನ ದೊಡ್ಡ ದೇಶಗಳಿಗೂ ಬಿಸಿ ತಟ್ಟಿದೆ. ಆದರೆ, ಕರ್ನಾಟಕ ಧೈರ್ಯದಿಂದ ಹೂಡಿಕೆದಾರರ ಸಮಾವೇಶ ಮಾಡಿದೆ. ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಯತ್ನಿಸುತ್ತಿದೆ. ಆದರೆ, ಕರ್ನಾಟಕ ಜಿಮ್ ಸಮಾವೇಶದ ಸಾಹಸ ಮಾಡಿದೆ, ಇದರ ಫಲಿತಾಂಶ ಒಡಂಬಡಿಕೆಯಲ್ಲಿ ಸ್ಪಷ್ಟವಾಗಿದೆ. ಕರ್ನಾಟಕ ಸರ್ಕಾರದ ಮೇಲೆ ನಂಬಿಕೆ ಇರಿಸಿ ಹೂಡಿಕೆ ಮಾಡಿದ್ದಾರೆ ಎಂದರು.
ನಮ್ಮ ಶಕ್ತಿ ನಮ್ಮ ಜನ, ಅತಿ ಹೆಚ್ಚಿನ ಕೌಶಲ್ಯವನ್ನು ಹೊಂದಿದ ಮಾನವ ಸಂಪನ್ಮೂಲ ಇದೆ, ನಮ್ಮ ನೀತಿಗಳೇ ನಮ್ಮ ಶಕ್ತಿ, ಜಿಮ್ ಯಶಸ್ಸಿನ ಹಿಂದೆ ನಮ್ಮ ತೆರಿಗೆ ನಿಯಮ, ಹೂಡಿಕೆ ನೀತಿ ಸರಳೀಕರಣವಿದೆ. ಕರ್ನಾಟಕ ಏನು ಆಲೋಚಿಸುತ್ತದೆಯೋ ದೇಶ ನಾಳೆ ಅದನ್ನು ಆಲೋಚಿಸುತ್ತದೆ. ಬೆಂಗಳೂರಿಗೆ ಪ್ರತಿದಿನ 10 ಸಾವಿರ ಇಂಜಿನಿಯರ್ಗಳು ಬರ್ತಾರೆ.
ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮನೀತಿ, ಚಿಂತನೆಗಳ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ, ಈ ರೀತಿ ನೀತಿ ಮಾಡಿರುವ ಮತ್ತೊಂದು ರಾಜ್ಯ ಇಲ್ಲ ಎಂದರು.