ಬೆಂಗಳೂರು: ಕೊರೊನಾ ಎರಡನೇ ಅಲೆಯ ಚೈನ್ ಲಿಂಕ್ ಕತ್ತರಿಸಲು ಲಾಕ್ ಡೌನ್ ಜಾರಿಗೊಳಿಸಿದ್ದು, ಈಗಾಗಲೇ ಚಾಲಕರು, ಕಾರ್ಮಿಕರು,ರೈತರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಮುಂದಿನ 10 ರಿಂದ 12 ದಿನಗಳಲ್ಲಿ ಯಾರಿಗೆ ಪರಿಹಾರ ಪ್ಯಾಕೇಜ್ ಸಿಕ್ಕಿಲ್ಲವೋ ಅವರಿಗೆ ಇನ್ನೊಂದು ಪ್ಯಾಕೇಜ್ ಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಪ್ಯಾಕೇಜ್ ವಿಚಾರದಲ್ಲಿ ಹಣಕಾಸಿನ ಇತಿಮಿತಿಯಲ್ಲಿ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಯಾರಿಗೆ ಏನು ಮಾಡಿಕೊಟ್ಟರು ಅನ್ನೋದು ಜಗತ್ತಿಗೇ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಲಸಿಕೆ ಕೊರತೆ ಇರುವುದು ನಿಜ..
ರಾಜ್ಯದಲ್ಲಿ ಲಸಿಕೆ ಕೊರತೆ ಇರೋದು ನಿಜ. ಇನ್ನು ಮುಂದೆ ಹೆಚ್ಚು ಲಸಿಕೆ ಕೊಡಬೇಕು ಅಂತಾ ದೆಹಲಿಯವರ ಬಳಿ ವಿನಂತಿ ಮಾಡಿದ್ದೇವೆ. ನಾವು ಕೂಡ ಲಸಿಕೆ ಖರೀದಿ ಮಾಡುತ್ತಿದ್ದೇವೆ 3 ಕೋಟಿ ಡೋಸ್ ಗೆ ಆರ್ಡರ್ ನೀಡಲಾಗಿದೆ. 18-44 ವಯೋಮಾನದವರಿಗೆ ನೀಡಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಈ ಲಸಿಕೆ ಬಂದಂತೆ ಅದನ್ನು ನೀಡುತ್ತೇವೆ. ನಮ್ಮಿಂದ ವಿಳಂಬವಾಗದಂತೆ ಲಸಿಕೆ ಹಾಕಲಾಗುತ್ತದೆ ಎಂದರು.
ಹಳ್ಳಿ, ಸ್ಲಂಗಳಲ್ಲಿ ಚಿಕ್ಕ ಚಿಕ್ಕ ಮನೆಯವರು ಸೋಂಕಿತರಾದಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಬರಲು ಸೂಚನೆ ನೀಡಿದ್ದೇನೆ. ಅಂಟು ರೋಗ ಹರಡುವ ಸಂಭವ ಇರುವುದರಿಂದ ಅವರು ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದರು.
ಶ್ರಮಿಕ ವರ್ಗಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ ಪೂರ್ವ ವಲಯ ವಾರ್ ರೂಂ ನಲ್ಲಿ ಮುಕ್ಕಾಲು ಗಂಟೆ ಇದ್ದು ಬಂದಿದ್ದೇನೆ. ಆಕ್ಸಿಜನ್ ಬೆಡ್ ಈಗ ಸಿಗುತ್ತಿವೆ. ಮೊದಲಿನಂತೆ ಸಮಸ್ಯೆ ಇಲ್ಲ. ವಾರ್ ರೂಂ ನಲ್ಲಿ ಕರೆ ಸ್ವೀಕಾರ ಮಾಡಿ ಮಾತಾಡಿದ್ದೇನೆ. ಮೊದಲು ಇದ್ದ ಸ್ಥಿತಿ ಇಗಿಲ್ಲ, ಸಾಕಷ್ಟು ಸುಧಾರಣೆ ಆಗಿದೆ. ಅಗತ್ಯತೆಗನುಗುಣವಾಗಿ ಐಸಿಯು ಬೆಡ್ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ 3,000 ಬೆಡ್ಗಳು ಇವೆ. ಅದರಲ್ಲಿ 1000 ಆಕ್ಸಿಜನ್ ಬೆಡ್ಗಳು ಇವೆ ಎಂದರು. ಕುಮಾರಕೃಪಾ ರಸ್ತೆಯಲ್ಲಿ ಬ್ಲಾಕ್ ಮಾಡುವ ಅಗತ್ಯ ಇಲ್ಲ: ಇಂದು ಮಾಧ್ಯಮದವರಿಗೆ ಆಗಿರುವ ಸಮಸ್ಯೆ ಮತ್ತೆ ಆಗದಂತೆ ನೋಡಿಕೊಳ್ಳುತ್ತೇನೆ. ಅದು ನನ್ನ ಜವಾಬ್ದಾರಿ ನಾನೇ ಬಂದು ನಿಮ್ಮ ಜೊತೆ ಕುಳಿತು ಮಾತಾಡಲು ಸಿದ್ಧನಿದ್ದೇನೆ. ಸಿಎಂ ನಿವಾಸದ ಬಳಿ ಮಾಧ್ಯಮದವರು 24 ಗಂಟೆ ಕೂಡಾ ಬರಬಹುದು. ಅಡ್ಡಿ ಮಾಡಿದವರಿಗೆ ಮಾಧ್ಯಮದವರನ್ನು ತಡೆಯದಂತೆ ಇವತ್ತೇ ಸೂಚನೆ ಕೊಡುತ್ತೇನೆ. ಇನ್ನು ಮುಂದೆ ಹೀಗಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಸಚಿವರ ಮೌಲ್ಯಮಾಪನ ಸತ್ಯಕ್ಕೆ ದೂರ
ರಾಜ್ಯದ ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ. ನಮ್ಮ ಹೈಕಮಾಂಡ್ ನಾಯಕರು ಯಾರೂ ಅಂತಹ ಕೆಲಸ ಮಾಡುತ್ತಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.