ಬೆಂಗಳೂರು: ಯುದ್ಧಪೀಡಿತ ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೂರವಾಣಿ ಮೂಲಕ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಭರವಸೆ ನೀಡಿದ್ದಾರೆ.
ಮಾತುಕತೆ ವೇಳೆ ತಮ್ಮ ಪರಿಸ್ಥಿತಿಯನ್ನು ವಿವರಿಸಿದ ವಿದ್ಯಾರ್ಥಿಗಳು, 'ಕಾರ್ಖೀವ್ ದಿಂದ 30 ಕಿ.ಮೀ. ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಬಂದಿದ್ದೇವೆ, ಸದ್ಯಕ್ಕೆ ನಾವು ಸುರಕ್ಷಿತವಾಗಿ ಇದ್ದೇವೆ' ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಮುಖ್ಯಮಂತ್ರಿ, ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಕರ್ನಾಟಕ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿದೆ. ನಿಮಗೆ ಎಲ್ಲಾ ರೀತಿಯ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಿಮ್ಮನ್ನು ಅಲ್ಲಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುತ್ತೇವೆ ಎಂಬ ಅಭಯ ನೀಡಿದರು.