ಬೆಂಗಳೂರು: ನಾಲ್ಕು ದಶಕದ ರಾಜಕೀಯ ಅನುಭವ ಇರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಇನ್ನೊಬ್ಬರು ಸಲಹೆ ಕೊಡುವ ಅಗತ್ಯವಿಲ್ಲ, ಆಡಳಿತ ನಡೆಸುವುದು ಅವರಿಗೆ ಗೊತ್ತಿದೆ, ನನ್ನ ಹಸ್ತಕ್ಷೇಪದ ಆರೋಪ ಕೇವಲ ರಾಜಕೀಯ ಕಾರಣದಿಂದ ಕೂಡಿದ್ದಾಗಿದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ಗೆ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಯಡಿಯೂರಪ್ಪ 30-40 ವರ್ಷಗಳ ಸುದೀರ್ಘ ಹೋರಾಟದ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಮುಖ್ಯಮಂತ್ರಿಯಾಗಿದ್ದಾರೆ. ಹಿಂದೆ ಶಾಸಕರಾಗಿ, ವಿರೋಧಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅವರದೇ ಆದ ಸೇವೆಯನ್ನು ನಾಡಿಗೆ ಕೊಟ್ಟುಕೊಂಡು ಬಂದಿದ್ದಾರೆ. ಅವರ ರಾಜಕೀಯ ಅನುಭವದ ಮುಂದೆ ವಿಜಯೇಂದ್ರ ಆಗಲಿ ಮತ್ತೊಬ್ಬರಾಗಲಿ ಅವರಿಗೆ ಸಲಹೆ ಕೊಡುವ ಅಗತ್ಯವಿಲ್ಲ ಅವರಿಗೆ ಎಲ್ಲವೂ ಗೊತ್ತಿದೆ ಎಂದರು.
ಸಿ.ಪಿ ಯೋಗೇಶ್ವರ್ ಕುರಿತು ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಯಡಿಯೂರಪ್ಪ ಅವರಿಗೆ ಯಾವ ರೀತಿ ಆಡಳಿತ ನಡೆಸಬೇಕು ಎಂದು ಗೊತ್ತಿದೆ ರಾಜಕೀಯ ಕಾರಣಕ್ಕೋಸ್ಕರ ಈ ರೀತಿ ಹೇಳಿಕೆ ನೀಡಲಾಗುತ್ತಿದೆಯೇ ಹೊರತು ಬೇರೆ ಏನಿಲ್ಲ. ಬೇರೆ ಯಾವುದೇ ಮಂತ್ರಿಯೂ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಹೇಳಿಕೆ ನೀಡಿಲ್ಲ ನನಗೂ ಕೂಡ ರಾಜ್ಯದ ಉಪಾಧ್ಯಕ್ಷರಾಗಿ ನನ್ನದೇ ಆದ ಕರ್ತವ್ಯವಿದೆ ನಾನು ನನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ ಹಾಗಾಗಿ ನನ್ನ ಹೆಸರು ಪ್ರಸ್ತಾಪ ಮಾಡಿ ಇಂತಹ ಹೇಳಿಕೆ ಕೊಟ್ಟಿದ್ದಾರೆ. ನನಗೆ ಯಾರ ಬಗ್ಗೆಯೂ ಏನೂ ಗೊತ್ತಿಲ್ಲ ಯಾರು ಏನು ಹೇಳಿದ್ದಾರೆ ಅನ್ನುವುದೂ ಗೊತ್ತಿಲ್ಲ ನಾನು ಬಿಜೆಪಿ ಉಪಾಧ್ಯಕ್ಷನಾಗಿ ನನ್ನ ಕಾರ್ಯ ಮಿತಿಯೊಳಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಉಚಿತ ಆ್ಯಂಬುಲೆನ್ಸ್ ಸೇವೆ
ಬಿಜಿಪಿ ಉಪಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಇಂದು ಮೈ ಸೇವಾ ವತಿಯಿಂದ ರಾಜ್ಯದ ವಿವಿಧ ಭಾಗಗಳಿಗೆ ಉಚಿತ ಆ್ಯಂಬುಲೆನ್ಸ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ಸ್ಗಳನ್ನು ಕಳುಹಿಸುವ ಸೇವೆಗೆ ಸಚಿವ ಆರ್ ಅಶೋಕ್ ಸಂಸದರಾದ ಪಿ.ಸಿಮೋಹನ್ ಚಾಲನೆ ನೀಡಿದರು. ಈ ಎಲ್ಲ ಆ್ಯಂಬುಲೆನ್ಸ್ಗಳು ಉಚಿತ ಸೇವೆ ನೀಡಲಿದ್ದು ಯಾವುದೇ ಶುಲ್ಕ ಇರುವುದಿಲ್ಲ ರೋಗಿಗಳು ಆ್ಯಂಬುಲೆನ್ಸ್ ಮೇಲೆ ಇರುವ ನಂಬರ್ ಗೆ ಕರೆ ಮಾಡಿದರೆ ಅವರು ಇರುವ ಜಾಗಕ್ಕೆ ಹೋಗಿ ಅವರು ಬಯಸಿದ ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಲಿವೆ.
ಮುಂಚೂಣಿ ಕಾರ್ಯಕರ್ತರಿಗೆ ಉಚಿತ ವಸತಿ:
ಎಷ್ಟೋ ಜನರಿಗೆ ಹೋಟೆಲ್ಗಳಿಗೆ ಹೋಗಿ ತಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡಿ ಕ್ವಾರಂಟೈನ್ ಆಗುವಂತಹ ಸ್ಥಿತಿ ಇಲ್ಲ ಹಾಗಾಗಿ ಬೆಂಗಳೂರು, ರಾಯಚೂರು ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಾವು ಕ್ವಾರಂಟೈನ್ ಕೇಂದ್ರ ಮಾಡಬೇಕು ಎಂದಿದ್ದೇವೆ. ಸದ್ಯ 50 ಕೊಠಡಿಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುತ್ತಿದ್ದೇವೆ ಮುಂಚೂಣಿ ಕಾರ್ಯಕರ್ತರು ಯಾರೇ ಬಂದರೂ ಅವರು ಉಚಿತವಾಗಿ ಇಲ್ಲಿ ಇರಬಹುದು ಊಟ ಮತ್ತು ವಸತಿ ಎರಡನ್ನೂ ನಾವು ಒದಗಿಸಲಿ ಇದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.