ಬೆಂಗಳೂರು: ರೈತ ಸಂಘಟನೆಗಳು ಸರ್ಕಾರದ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷ ಬೆಂಬಲ ನೀಡಿದ್ದರೂ ಜೆಡಿಎಸ್ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೃದು ಧೋರಣೆ ತಳೆದಿದ್ದಾರೆ.
ರೈತರ ಹೋರಾಟ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಜೆಡಿಎಸ್ ರೈತ ಸಂಘಟನೆಗಳ ಜೊತೆ ಕೈ ಜೋಡಿಸಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿ ಜೆಡಿಎಸ್ ಬಗ್ಗೆ ಮೃದು ಧೋರಣೆ ಪ್ರದರ್ಶಿಸಿದರು.
ಜೆಡಿಎಸ್ ಬಗ್ಗೆ ಮೃದು ಧೋರಣೆ ತೋರಿದ ಸಿಎಂ ಜೆಡಿಎಸ್ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲ್ಲ. ಸದನದಲ್ಲಿ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಯಲ್ಲಿನ ಹಲವು ವಿಷಯಗಳಿಗೆ ಜೆಡಿಎಸ್ ಒಪ್ಪಿಗೆ ನೀಡಿದೆ. ಆದರೆ, ಕಾಂಗ್ರೆಸ್ ಮಾತ್ರ ಸಂಪೂರ್ಣ ವಿರೋಧ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಜನರೇ ಕಾಂಗ್ರೆಸ್ಗೆ ಪಾಠ ಕಲಿಸಲಿದ್ದಾರೆ ಎಂದರು.
ಅವರ್ಯಾರೋ ದೆಹಲಿಯಿಂದ ಬಂದಿದ್ದಾರೆ. ಅವರಿಗೋಸ್ಕರ ಇವರು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ನೂತನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಹೆಸರೇಳದೇ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸುರ್ಜೇವಾಲ ವಿರುದ್ಧ ಹರಿಹಾಯ್ದ ಸಿಎಂ, ಒಂದು ವಾರದ ಹಿಂದೆ ತಾನೆ ರಾಜ್ಯಕ್ಕೆ ಬಂದಿದ್ದಾರೆ. ಮೊದಲು ಅವರು ಕಾಂಗ್ರೆಸ್ ಪಕ್ಷ ಸಂಘಟಿಸಲಿ ಆಮೇಲೆ ಬಿಜೆಪಿ ಹಾಗೂ ಮತ್ತೊಂದರ ಬಗ್ಗೆ ಮಾತನಾಡಲಿ ಎಂದು ಸುರ್ಜೇವಾಲಾಗೆ ತಿರುಗೇಟು ನೀಡಿದರು.