ಬೆಂಗಳೂರು:ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜೀವ, ಆಸ್ತಿ ಹಾನಿ ಉಂಟಾಗಿದೆ. ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಈವರೆಗೂ 38 ಜನರು ಸಾವನ್ನಪ್ಪಿದ್ದಾರೆ. ಮೃತ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ತಡವಾಗಿ ಮುಂಗಾರು ಕಾಲಿಟ್ಟರು ಕೆಲವೆಡೆ ಉತ್ತಮ ಮಳೆಯಾಗುತ್ತಿದೆ. ಪ್ರವಾಹ ಉಂಟಾಗಿ ಹಾನಿ ಕೂಡ ಆಗಿದೆ. ಮಳೆಯಿಂದ 38 ಜನರು ಪ್ರಾಣ ಕಳೆದುಕೊಂಡಿದ್ದಾರೆ. 35 ಜನ ಗಾಯಗೊಂಡಿದ್ದಾರೆ. 57 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 208 ಮನೆಗಳಿಗೆ ತೀವ್ರವಾಗಿ ಹಾನಿಯಾಗಿದೆ. ಜೊತೆಗೆ 2,682 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ತಿಳಿಸಿದರು.
ಪ್ರವಾಹ ಸಂಬಂಧಿತ ಘಟನೆಗಳಲ್ಲಿ 105 ಜಾನುವಾರುಗಳು ಕೊಚ್ಚಿ ಹೋಗಿವೆ. 185 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾನಿಯಾಗಿದೆ. 356 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾಳಾಗಿದೆ. ಒಟ್ಟು 541 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗೆ ನೀರು ನುಗ್ಗಿ ಬೆಳೆ ನಾಶವಾಗಿ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
11,995 ವಿದ್ಯುತ್ ಕಂಬಗಳು ಬಿದ್ದಿವೆ. 894 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ಇನ್ನೂರ ಹದಿನೈದು ಕಿಲೋಮೀಟರ್ನಷ್ಟು ವಿದ್ಯುತ್ ಸರಬರಾಜು ಕಡಿತವಾಗಿದೆ. 189 ಸೇತುವೆಗಳು 859 ಶಾಲಾ ಕೊಠಡಿಗಳು, 8 ಪ್ರಾಥಮಿಕ ಕೇಂದ್ರಗಳು, 269 ಅಂಗನವಾಡಿ ಕೇಂದ್ರಗಳು ಹಾನಿಗೀಡಾಗಿವೆ. ನೆರೆ ಸಂತ್ರಸ್ತರಿಗಾಗಿ 2 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. 50 ಜನ ಅದರಲ್ಲಿ ಸದ್ಯ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.