ಬೆಂಗಳೂರು :ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ. ಕಿತ್ತೂರು ಕರ್ನಾಟಕ ಬೆಳಗಾವಿ ಭಾಗದ ಲಕ್ಷಾಂತರ ಕನ್ನಡಿಗರ ಪರವಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರ ಜೂನ್ 17, 2023ಕ್ಕೆ ರಾಜ್ಯದಲ್ಲಿ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಬೆಂಗಳೂರು-ಹುಬ್ಬಳ್ಳಿ-ಧಾರವಾಡವರೆಗೆ ಆರಂಭಿಸಿತ್ತು. ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಬೆಳಗಾವಿ ಅನೇಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಸಕ್ಕರೆ ಕಾರ್ಖಾನೆ, ಆಟೋ ಮೊಬೈಲ್ ಉದ್ದಿಮೆಗೆ ಆಶ್ರಯ ತಾಣವಾಗಿದ್ದು, ಆರ್ಥಿಕವಾಗಿ ಪ್ರಮುಖ ಜಿಲ್ಲೆಯಾಗಿದೆ. ಹೀಗಾಗಿ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿ ನಗರವರೆಗೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ. ಇದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ನಡುವೆ ಸಂಪರ್ಕ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.
ನನ್ನ ಸಹದ್ಯೋಗಿ ಎಂಎಲ್ ಸಿ ಪ್ರಕಾಶ್ ಹುಕ್ಕೇರಿ ಈ ಸಂಬಂಧ ಈಗಾಗಲೇ ನಿಮಗೆ ಪತ್ರ ಬರೆದಿದ್ದಾರೆ. ಈ ಕುರಿತು ನೀವು ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾ ಪಟ್ಟಿ ಪರಿಷ್ಕರಣೆ: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಮಯವನ್ನು ಈ ಹಿಂದೆ ಪರಿಷ್ಕರಿಸಲಾಗಿತ್ತು. ಅಕ್ಟೋಬರ್ 7ರಿಂದ ಜಾರಿಗೆ ಬರುವಂತೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು.
ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 11:30/11:35ರ ಬದಲು ಬೆಳಗ್ಗೆ 11:00/11:05 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ ಎಂದು ಹೇಳಿತ್ತು. ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಯಶವಂತಪುರ ನಿಲ್ದಾಣಕ್ಕೆ ಸಂಜೆ 07:13-07:15ರ ಬದಲು ಸಂಜೆ 06:58-07:00 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ. ಇತರ ಎಲ್ಲಾ ನಿಲ್ದಾಣಗಳಲ್ಲಿ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಷ್ ಹೆಗಡೆ ತಿಳಿಸಿದ್ದರು.
ಕಳೆದ ಜೂನ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಇದು ಕರ್ನಾಟಕದ 2ನೇ ವಂದೇ ಭಾರತ್ ರೈಲು ಸೇವೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು- ಹುಬ್ಬಳ್ಳಿ-ಧಾರವಾಡ ನಡುವೆ ಒಂದು ಬಾರಿ ಈ ರೈಲು ಸಂಚಾರ ನಡೆಸುತ್ತಿದ್ದು, 8 ಬೋಗಿಗಳನ್ನು ಹೊಂದಿದೆ.
ಇದನ್ನೂ ಓದಿ :ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ