ಕರ್ನಾಟಕ

karnataka

ETV Bharat / state

ವಿಶೇಷ ಅನುದಾನ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದ ಸಿದ್ದರಾಮಯ್ಯ

ರಾಜ್ಯದ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಪತ್ರ ಬರೆದಿದ್ದಾರೆ.

cm-siddaramaih-wrote-letter-to-finance-minister-nirmala-sitharaman-for-special-grants
ವಿಶೇಷ ಅನುದಾನ ಬಿಡುಗಡೆಗಾಗಿ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Aug 21, 2023, 7:56 PM IST

ಬೆಂಗಳೂರು :ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಮತ್ತು ರಾಜ್ಯದ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 15ನೇ ಹಣಕಾಸು ಆಯೋಗದ 2020-21ರ ಪ್ರಕಾರ ವಿಶೇಷ ಅನುದಾನವಾಗಿ 5,495 ಕೋಟಿ ರೂ. ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

2021-22ರಲ್ಲಿ ಹಣಕಾಸು ಆಯೋಗ 6 ಸಾವಿರ ಕೋಟಿ ರೂ. ಅನ್ನು ಬೆಂಗಳೂರಿನ ನೀರಾವರಿ ಕಾಮಗಾರಿ ಮತ್ತು ಪೆರಿಫರಲ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು. ಆದರೆ ಯಾವುದೇ ಅನುದಾನ ರಾಜ್ಯ ಸರ್ಕಾರಕ್ಕೆ ನೀಡಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಹಿನ್ನಡೆಯಾಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು ವಿಶೇಷ ಅನುದಾನ ಮತ್ತು ನಿರ್ದಿಷ್ಟ ಅನುದಾನಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆ 14ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ಶೇ. 4.71 ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲನ್ನು 3.647 ಪ್ರತಿಶತಕ್ಕೆ ಇಳಿಸಲಾಗಿದೆ. ಆಯೋಗವು ನಿಗದಿಪಡಿಸಿದ್ದ ಆದಾಯದ ಮಾನದಂಡಗಳನ್ನು ಕರ್ನಾಟಕವು ಕಳೆದುಕೊಂಡಿದೆ. 2011-12ರಲ್ಲಿ ರಾಜ್ಯದ ಜಿಎಸ್​ಡಿಪಿಯನ್ನು 30 ಪ್ರತಿಶತದಷ್ಟು ಹೆಚ್ಚಿಸಲಾಗಿದ್ದು, ಎಲ್ಲಾ ರಾಜ್ಯಗಳು ಸೇರಿದಂತೆ 9 ಪ್ರತಿಶತಕ್ಕಿಂತ ಕಡಿಮೆ ಸರಾಸರಿ ಹೆಚ್ಚಳವಾಗಿದೆ. 2011-12ರಲ್ಲಿ ಐಟಿಗೆ ಸಂಬಂಧಿತ ಸೇವೆಗಳಲ್ಲಿ ರಾಜ್ಯದ ಜಿಎಸ್​ಡಿಪಿ ಗಣನೀಯವಾಗಿ ಹೆಚ್ಚಳವಾಗಿದೆಯಾದರೂ ಐಟಿ ಸೇವೆಗಳ ರಫ್ತು ಶೂನ್ಯ ದರವನ್ನು ಹೊಂದಿರುವುದರಿಂದ ರಾಜ್ಯದ ತೆರಿಗೆಗಳಿಗೆ ಈ ಸೇವೆಗಳು ಯಾವುದೇ ಸಹಕಾರಿಯಾಗಿಲ್ಲ. 14ನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಹೋಲಿಕೆ ಮಾಡಿದರೆ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಪಾಲು ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು ತೆರಿಗೆ ಹಂಚಿಕೆಯಲ್ಲಿ 37,011ಕೋಟಿ ರೂ.ಕಡಿಮೆ ಮಾಡಿದೆ.

15 ನೇ ಹಣಕಾಸು ಆಯೋಗದ 2020-21 ರ ಪ್ರಕಾರ ವಿಶೇಷ ಅನುದಾನವಾಗಿ ಕರ್ನಾಟಕಕ್ಕೆ 5,495 ಕೋಟಿ ರೂ. ಶಿಫಾರಸು ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಆಯೋಗದ ಶಿಫಾರಸನ್ನು ಪರಿಗಣಿಸಿಲ್ಲ. ರಾಜ್ಯದ ಸಂಪನ್ಮೂಲಗಳು ಹಾಗೂ ಕೇಂದ್ರ ಸರ್ಕಾರದ ಹಣಕಾಸಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅನುದಾನಗಳ ಶಿಫಾರಸನ್ನು ಸೂಕ್ತವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ. ಆದರೆ, ಕರ್ನಾಟಕಕ್ಕೆ ಇದುವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ತೆರಿಗೆ ಹಂಚಿಕೆಯಲ್ಲಿ ತೀವ್ರ ಕಡಿತ ಮಾಡಲಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯದ ಹಣಕಾಸಿನ ಸ್ಥಿತಿಗೆ ಇದು ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಿಂದ ಹಿಮಾಚಲ ಪ್ರದೇಶಕ್ಕೆ ನೆರವಿನ ಹಸ್ತ: ಪ್ರವಾಹ ಮತ್ತು ಭೂ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶಕ್ಕೆ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಕೋಟಿ ರೂಗಳನ್ನು ನೀಡುವಂತೆ ಆದೇಶಿಸಿದ್ದಾರೆ. ಈ ಆದೇಶದಂತೆ ಹಣ ಬಿಡುಗಡೆಗೊಳಿಸಲಾಗಿದೆ.

ಇದನ್ನೂ ಓದಿ :ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಶೀಘ್ರ ರಾಮನಗರಕ್ಕೆ ಸ್ಥಳಾಂತರ: ಸಚಿವ ಶರಣಪ್ರಕಾಶ್ ಪಾಟೀಲ್

ABOUT THE AUTHOR

...view details