ಬೆಂಗಳೂರು: ಪ್ರತಿಯೊಬ್ಬ ಅಧಿಕಾರಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ವಿದ್ಯಾವಂತರಾದ ಅಧಿಕಾರಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಜಾತ್ಯತೀತ ಹಾಗೂ ಸಮಾನ ಸಮಾಜವನ್ನು ನಿರ್ಮಿಸಬಹುದಾಗಿದೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಅಧಿಕಾರಿಗಳು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ‘ಶತಮಾನೋತ್ಸವ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕಾರಣಿಗಳು ಕಾನೂನು ಹಾಗೂ ನೀತಿಗಳನ್ನು ನಿರೂಪಿಸಿದರೆ, ಅವುಗಳನ್ನು ಜಾರಿಗೊಳಿಸುವುದು ಅಧಿಕಾರಿಗಳು. ಅಧಿಕಾರಿಗಳು, ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸರ್ಕಾರದ ಅಧಿಕಾರಿ ಹಾಗೂ ನೌಕರರು ಬಡವರ ವಿರೋಧಿ, ಜನವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಬಾರದು. ಜಾತಿ ಧರ್ಮಗಳ ಕಲಹದಲ್ಲಿಯೂ ಇರಬಾರದು. ಧರ್ಮಕ್ಕೂ, ಆಡಳಿತಕ್ಕೂ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಅಥವಾ ಧರ್ಮ ಕಲಹಗಳಲ್ಲಿ ತೊಡಗಿಕೊಳ್ಳಬಾರದು. ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ದೇಶವನ್ನು ರಕ್ಷಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮಾನತೆ ಇಲ್ಲ. ಹೀಗೆ ಮುಂದುವರೆದರೆ, ಅಸಮಾನತೆಗೆ ಒಳಗಾದ ಜನರು ಸ್ವಾತಂತ್ರ್ಯ ಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆ ಇದೆ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಇದು ಎಲ್ಲ ನಾಗರಿಕರ ಕರ್ತವ್ಯ. ಇದನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಸುಧಾರಣೆ ತರಬಹುದಾಗಿದೆ. ಈಗ ಶಿಕ್ಷಣ ಅಭಿವೃದ್ಧಿಗೊಳ್ಳುತ್ತಿದೆ. ವಿದ್ಯಾವಂತರು ಜಾತ್ಯತೀತೆ, ವೈಚಾರಿಕತೆಯನ್ನು ಪಾಲಿಸಬೇಕು ಎಂದರು.
ಸಾಮಾಜಿಕ ಸುಧಾರಣೆ: ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೊಳಿಸುವ ಭರವಸೆಯನ್ನು ನೀಡಿದೆ. ಈಗಾಗಲೇ 3 ಗ್ಯಾರಂಟಿ ಜಾರಿಯಾಗಿವೆ. ಆಗಸ್ಟ್ 24ರಂದು 4 ನೇ ಗ್ಯಾರಂಟಿ ಹಾಗೂ 5ನೇ ಗ್ಯಾರಂಟಿ ಡಿಸೆಂಬರ್ ಅಥವಾ ಜನವರಿ 2024ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ್ಯ ಭಾರತದ ಫಲವನ್ನು ಜನರಿಗೆ ತಲುಪಿಸುವ ಮೂಲಕ ಸಾಮಾಜಿಕ ಸುಧಾರಣೆಯನ್ನು ತರಬಹುದಾಗಿದೆ ಎಂದು ಹೇಳಿದರು.
ಇದೇ ದಿನ ಮಹಾತ್ಮ ಗಾಂಧಿಯವರು ಬ್ರಿಟಿಷರಿಗೆ ಅಂತಿಮ ಕರೆ ನೀಡಿದ ಕ್ವಿಟ್ ಇಂಡಿಯಾ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕೆಂದು ಸಂಕಲ್ಪ ಮಾಡಬೇಕಾದ ದಿನ. ಅಧಿಕಾರಿಗಳಾಗಲಿ, ಜನರಾಗಲಿ, ಸಮಾಜ ನನಗೇನು ಮಾಡಿತು ಎನ್ನುವ ಬದಲು ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಸಮಾಜವನ್ನು ಬದಲಾವಣೆ , ಸುಧಾರಣೆ , ಸಮಾನತೆಯ ಸಮಾಜ ನಿರ್ಮಾಣದ ಜವಾಬ್ದಾರಿ ನಮ್ಮ ಮೇಲಿದೆ. ಇದೇ ತತ್ವವನ್ನು ಬಸವ, ಬುದ್ಧ, ಗಾಂಧೀಜಿ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಸೇರಿದಂತೆ ಹಲವು ದಾರ್ಶನಿಕರು ಬೋಧಿಸಿದ್ದಾರೆ ಎಂದರು.
ಅರ್ಥಪೂರ್ಣ ಶತಮಾನೋತ್ಸವ: 1919ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದಕ್ಕೆ ಸ್ಫೂರ್ತಿ ಒಬ್ಬ ಐರ್ಲೆಂಡ್ ಅಧಿಕಾರಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯನ್ನು ಸುವರ್ಣ ಯುಗ ಎನ್ನಲಾಗುತ್ತದೆ. ಅವರ ಕಾಲದಲ್ಲಿ ಆದಂತಹ ಅಭಿವೃದ್ಧಿ, ಸಾಮಾಜಿಕ ಕಾರ್ಯಗಳು, ಉದ್ದಿಮೆಗಳು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಆಗಿದ್ದವು. ಇದೇ ಅವಧಿಯಲ್ಲಿ ನಾಗರಿಕ ಸೇವೆ ಎಂಬ ಕಲ್ಪನೆಗೆ ಜೀವ ಬಂದಿತು. 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಮೊದಲು ಮೈಸೂರು ಆಡಳಿತ ಸೇವೆ ಎಂದಿದ್ದು, ನಂತರ ಕರ್ನಾಟಕ ಆಡಳಿತ ಸೇವೆ ಎಂದು ಹೆಸರಿಸಲಾಯಿತು. ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ತನ್ನ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ ಎಂದು ತಿಳಿಸಿದರು.